


ಬಂಟ್ವಾಳ: ತಾಲೂಕಿನ ಸಜೀಪಮುನ್ನೂರು ಗ್ರಾಮ ಪಂಚಾಯತಿಯಲ್ಲಿ ಗುರುವಾರ ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಯುಷ್ ಇಲಾಖೆಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿ ಡಾ.ಕೆ.ಎ.ಮಣಿಕರ್ಣಿಕ, ಆಯುರ್ವೇದ ಚಿಕಿತ್ಸೆ ಪದ್ಧತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ತರಕಾರಿ, ಸೊಪ್ಪಿನ ಆಹಾರ ಪದಾರ್ಥಗಳು ಮನುಷ್ಯನ ಆಯಸ್ಸನ್ನು ವೃದ್ಧಿಸುವ ಶಕ್ತಿ ಹೊಂದಿದೆ ಎಂದು ಕಿವಿಮಾತು ಹೇಳಿದರು.
ಯೋಗ ತರಬೇತುದಾರರಾದ ಉಮೇಶ ಹಾಗೂ ಗೌತಮಿ ಯೋಗದ ಮಹತ್ವವನ್ನು ತಿಳಿಸಿದರು.
ಗ್ರಾ.ಪಂ. ಪಿಡಿಒ ಲಕ್ಷ್ಮಣ್ ಮಾತನಾಡಿ, ಅಧಿಕ ರಕ್ತದೊತ್ತಡ, ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ವೈದ್ಯರು ಸಾರ್ವಜನಿಕರು ಹಾಗೂ ನರೇಗಾ ಫಲಾನುಭವಿಗಳ ಆರೋಗ್ಯ ತಪಾಸಣೆ ನಡೆಸಿದರು. ಔಷಧೀಯ ಸಸ್ಯ, ಆಯುಷ್ ಮಾಹಿತಿ ಕೈಪಿಡಿ ವಿತರಿಸಲಾಯಿತು. ಗ್ರಾಪಂ ಸದಸ್ಯರು, ತಾಲೂಕು ಐಇಸಿ ಸಂಯೋಜಕ ರಾಜೇಶ್, GPAAA ತಾಲೂಕು ಸಂಯೋಜಕ ಅಲ್ಲಾಭಕ್ಷ್, ಸಜಿಪನಡು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಜೆನ್ನಿಫರ್, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.


