ಸುಳ್ಯ: ಗುರುಂಪು ಎಂಬಲ್ಲಿ ನಿರ್ಮಾಣ ಕಾಮಗಾರಿ ವೇಳೆ ಬರೆ ಕುಸಿದು ಮಣ್ಣಿನಡಿ ಸಿಲುಕಿ ಗದಗದ ಮೂವರು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರಿಗೆ ತಲಾ 50 ಸಾವಿರ ರೂ. ತತ್‌ಕ್ಷಣದ ಪರಿಹಾರ ವಿತರಿಸಲಾಗಿದೆ ಎಂದು ತಿಳಿದುಬಂದಿದೆ.

ಶನಿವಾರ ಮೃತಪಟ್ಟ ಕಾರ್ಮಿಕರ ಕುಟುಂಬಸ್ಥರು ಹಾಗೂ ಸ್ಥಳೀಯ ಕಾರ್ಮಿಕರ ಮುಖಂಡರ ನೇತೃತ್ವದಲ್ಲಿ ಸುಳ್ಯ ಠಾಣೆ ಬಳಿ ಜಮಾಯಿಸಿ ಪರಿಹಾರಕ್ಕೆ ಆಗ್ರಹಿಸಿದ್ದರು. ಈ ವೇಳೆ ಮನೆಯವರು, ಎಂಜಿನಿಯರ್‌ ಮತ್ತಿತರರ ಜತೆ ಠಾಣೆಯಲ್ಲಿ ಮಾತುಕತೆ ನಡೆಸಲಾಯಿತು. ಅದರಂತೆ ಮೃತಪಟ್ಟವರಿಗೆ ಬರೆ ಕುಸಿತವಾದ ಮನೆಯ ಮಾಲಕರು ಮತ್ತು ಎಂಜಿನಿಯರ್‌ ಸೇರಿ ತಲಾ 2.50 ಲಕ್ಷ ರೂ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಅದರಂತೆ ಮೊದಲಿಗೆ ಮೂವರ ಮನೆಯವರಿಗೆ ತಲಾ 50 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. ಉಳಿದಂತೆ ತಲಾ 2 ಲಕ್ಷ ರೂ.ಗಳನ್ನು ಪ್ರಕರಣ ನ್ಯಾಯಾಲಯದಲ್ಲಿ ಮುಗಿದ ಬಳಿಕ ನೀಡಲು ನಿರ್ಧರಿಸಲಾಗಿದೆ. ಮೃತ ಕಾರ್ಮಿಕರ ಮನೆಯವರು, ಕಾರ್ಮಿಕ ಮುಖಂಡರು, ನ.ಪಂ. ಅಧ್ಯಕ್ಷರು, ಪೊಲೀಸರ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಮೃತರಾದವರಿಗೆ ಸರಕಾರದ ವತಿಯಿಂದಲೂ ಪರಿಹಾರ ನೀಡಬೇಕು ಎಂದು ಆಗ್ರಹ ಹೆಚ್ಚುತ್ತಿದೆ.

ಮೃತಪಟ್ಟ ಮೂವರು ಕಾರ್ಮಿಕರ ಮೃತದೇಹಗಳ ಶವಪರೀಕ್ಷೆಯನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ ಶನಿವಾರ ಮೃತರ ಊರಾದ ಗದಗಕ್ಕೆ ಆಂಬ್ಯುಲೆನ್ಸ್ ಮೂಲಕ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.

ಘಟನೆಯಲ್ಲಿ ಸೋಮಶೇಖರ ರೆಡ್ಡಿ ಹಾಗೂ ಶಾಂತಾ ದಂಪತಿ ಮೃತಪಟ್ಟಿದ್ದು, ಅವರ ಅವರ ಇಬ್ಬರು ಗಂಡುಮಕ್ಕಳು ಅನಾಥರಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಪರಿಹಾರ ನೀಡುವ ಕೆಲಸ ಆಗಬೇಕಿದೆ ಎಂಬ ಬೇಡಿಕೆ ಕೇಳಿಬಂದಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here