ವಿಟ್ಲ: ಮಾತೆ ಎಂಬುದು ನಮ್ಮ ದೇಶದ ಸಂಸ್ಕೃತಿಯಾಗಿದೆ. ಸಂಸ್ಕಾರವಂತ ಮಾತೆಯರು ಮನೆ ಎಂಬ ವೃಕ್ಷದ ತಾಯಿಬೇರು ಇದ್ದಂತೆ. ಇಂತಹ ತಾಯಂದಿರ ಮೂಲಕ ಶೋಭಾಯಮಾನ ಗೃಹ ನಿರ್ಮಾಣವಾಗುತ್ತದೆ. ಸುಭದ್ರ ತಾಯಿಬೇರಿನ ಆಧಾರದಲ್ಲಿ ಬೆಳೆಯುವ ವೃಕ್ಷದಂತೆ ನಮ್ಮ ಬದುಕಾಗಬೇಕು. ಸಮಾಜದ ಉನ್ನತಿಗೆ ಮಹಿಳೆ ಕಾರಣಳಾಗಿದ್ದಾಳೆ ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ನುಡಿದರು.
ಅವರು ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಮಹಿಳೆಯರಿಗೆ ನೀಡಿದ ಸ್ವಾತಂತ್ರ್ಯ ಎಂದೂ ಸ್ವೇಚ್ಛಾಚಾರ ಆಗಬಾರದು ಎಂದರು.
ಶಿಕ್ಷಣ ಚಿಂತಕಿ, ಉಪನ್ಯಾಸಕಿ ಅಮೃತವರ್ಷಿಣಿ ಬೆಂಗಳೂರು ಧಾರ್ಮಿಕ ಉಪನ್ಯಾಸ ನೀಡಿ ಸಮಾಜದ ಸಮಸ್ಯೆಗಳಿಂದ ಹೊರ ತರುವುದೇ ಶಿಕ್ಷಣವಾಗಿದೆ. ಮನೆಮನಗಳನ್ನು ಜೋಡಿಸುವ ಕೊಂಡಿಯಾಗಿರುವ ಮಾತೆ, ಉತ್ತಮ ಸಮಾಜ ನಿರ್ಮಾಣಕ್ಕೂ ಕಾರಣಳಾಗಿದ್ದಾಳೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಂಆರ್ ಪಿ ಎಲ್ ಪ್ರಶಿಕ್ಷಣ ಘಟಕದ ಮಹಾಪ್ರಬಂಧಕಿ ವೀಣಾ ಟಿ.ಶೆಟ್ಟಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಮಾಜಿ ಶಾಸಕಿ ಟಿ.ಶಕುಂತಳಾ ಶೆಟ್ಟಿ, ಪುಣಚ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರತಿಭಾ ಜಗನ್ನಾಥ ಗೌಡ, ಪುತ್ತೂರು ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ರೂಪಲೇಖ, ವಾರಾಣಾಸಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕಿ, ಅಶ್ವಿನಿ ಕೃಷ್ಣಮೂರ್ತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಇದರ ವಲಯ ಮೇಲ್ವಿಚಾರಕಿ ಮಾಲತಿ ಭಾಗವಹಿಸಿದ್ದರು.
ಮಹಿಳಾ ಸಮಿತಿ ಅಧ್ಯಕ್ಷೆ ನವೀನಲತಾ ಶಾಸ್ತ್ರಿ ಮಣಿಲ ಸ್ವಾಗತಿಸಿದರು. ಕಾರ್ಯದರ್ಶಿ ಮಮತಾ ಶೆಟ್ಟಿ ದೇವರಗುಂಡಿ ವಂದಿಸಿದರು.
ನಿವೃತ್ತ ಮುಖ್ಯ ಶಿಕ್ಷಕಿ ಗಂಗಮ್ಮ ಹರಿಕೃಷ್ಣ ಶಾಸ್ತ್ರಿ ಮಣಿಲ, ಶಿಕ್ಷಕಿ ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಬಳಿಕ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ಮಸ್ತ್ ಮ್ಯಾಜಿಕ್ ಪ್ರದರ್ಶನಗೊಂಡಿತು.