ಬಂಟ್ವಾಳ: ಇರಾ ಗ್ರಾಮದ ತಿರುವಾಲೆ ಶ್ರೀ ವಯನಾಡು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾ.18 ರಿಂದ ಮಾ19 ರವರೆಗೆ ಒತ್ತೆ ಕೋಲ- ಕೆಂಡಸೇವೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ತಿಳಿಸಿದರು.
ಅವರು ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ ದ ಬಿರ್ಮಣ ಅತಾರ್ ಮತ್ತು ಕರಿಂಬಲ್ಲು ತರವಾಡು ಸತೀಶ್ ಬೈಜೇರ್ ಪಟ್ಟತ್ತೂರುವರ ಮಾರ್ಗದರ್ಶನ ದೊಂದಿಗೆ ಆಚಾರಪಟ್ಟವರು ಮತ್ತು ಗುರಿಕಾರರ ಸಲಹೆಗಳೊಂದಿಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿದ್ಯುಕ್ತವಾಗಿ ನಡೆಯಲಿದೆ ಎಂದು ಅವರು ತಿಳಿಸಿದರು.
ಕ್ಷೇತ್ರದ ಜೀರ್ಣೋದ್ಧಾರದ ಬಳಿಕ ಇದೀಗ 5 ವರ್ಷದ ಬಳಿಕ ಮತ್ತೆ ಇಲ್ಲಿ ಒತ್ತೆಕೋಲ ನಡೆಯಲಿದೆ. ಮಲಯಾಳಿ ಬಿಲ್ಲವ ಪಾತ್ರಿಗಳ ಮೂಲಕ ಕೆಂಡಸೇವೆ ನಡೆಯಲಿದೆ. ಸುಮಾರು 40 ಅಡಿಗಳ ಎತ್ತರಕ್ಕೆ ಕಟ್ಟಿಗೆಯ ರಾಶಿ ಹಾಕಲಿದ್ದು, ಮುಂಜಾನೆ 4 ಗಂಟೆಯ ವೇಳೆಗೆ ಒತ್ತೆಕೋಲ ನಡೆಯಲಿದೆ. ಮಾ.12 ರಂದು ಗೊನೆಕಡಿದು ಮಾ17 ರಂದು ಸಂಜೆ 4 ಗಂಟೆಗೆಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು, ಅಕರ್ಷಕ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಲಿದೆ ಎಂದು ಅವರು ತಿಳಿಸಿದರು.
ಮಾ 18 ರಂದು ಬೆಳಿಗ್ಗೆ ಮೇಲೇರಿ ರಚನೆ ನಡೆಯಲಿದೆ. ಸಂಜೆ 6 ಗಂಟೆ ಗೆ ಒತ್ತೆಕೋಲ ಕೆಂಡಸೇವೆ ಶ್ರೀ ದೈವಗಳ ಭಂಡಾರ ಏರಲಿದೆ. ರಾತ್ರಿ 7. ಗಂಟೆ ಗೆ ವಿಷ್ಣುಮೂರ್ತಿ ದೈವದ ತೊಡಂಗಲ್ ಮತ್ತು ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಿದೆ. ರಾತ್ರಿ 8 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಪ್ರತಾಪ್ ಸಿಂಹ ನಾಯಕ್ ಸಹಿತ ಅನೇಕ ಗಣ್ಯ ರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಮಾ.19 ರಂದು ರಾತ್ರಿ ಮರು ಪುತ್ತೇರಿ ಸೇವೆ ನಡೆಯಲಿದೆ ಎಂದು ಅವರು ತಿಳಿಸಿದರು
ಭಕ್ತರಿಗೆ ಕೊಲ್ಲಿ ಸೇವೆಗೆ ಅವಕಾಶ ನೀಡಲಾಗಿದ್ದು, ಹಲಸು,ಹುಣಸೆ,ಹಾಳೆಮರ,ಕಾಕಸಮರ, ಗೋಳಿಮರ, ಕುಂಟಲು ಜಾತಿಯ ಮರಗಳನ್ನು ಕೊಲ್ಲಿ ಸೇವೆಗಾಗಿ ಹತ್ತು ದಿನಗಳ ಮುಂಚಿರ ನೀಡುವಂತೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಿರುವಾಲೆ, ಕೋಶಾಧಿಕಾರಿ ರಮೇಶ್ ಪೂಜಾರಿ ತಿರುವಾಲೆ, ಜೊತೆಕಾರ್ಯದರ್ಶಿ ಅಚ್ಚುತ ಪೂಜಾರಿ ತಿರುವಾಲೆ, ಉತ್ಸವ ಸಮಿತಿ ಅಧ್ಯಕ್ಷ ರಾದ ವೈ.ಬಿ.ಸುಂದರ್ ಇರಾ, ಉಪಾಧ್ಯಕ್ಷ ಗೋಪಾಲ ಪೂಜಾರಿ ತಿರುವಾಲೆ, ಕೋಶಾಧಿಕಾರಿ ಜಯರಾಮ್ ಪೂಜಾರಿ ಸೂತ್ರಬೈಲು, ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.