ಮಂಗಳೂರು: ನಗರದ ಚಿನ್ನಾಭರಣದ ಅಂಗಡಿಯೊಂದರ ಸಿಬ್ಬಂದಿಯನ್ನು ಚೂರಿಯಿಂದ ಇರಿದು ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿ ಕೇರಳ ಕೊಯಿಲಾಂಡಿಯ ಶಿಫಾಝ್ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಕಾಸರಗೋಡಿನಲ್ಲಿ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಂಪನಕಟ್ಟೆಯ ‘ಮಂಗಳೂರು ಜ್ಯುವೆಲ್ಲರ್ಸ್’ನಲ್ಲಿ ಕೆಲಸ ಮಾಡುತ್ತಿದ್ದ ಅತ್ತಾವರ ನಿವಾಸಿಯಾಗಿದ್ದ ರಾಘವೇಂದ್ರ ಆಚಾರ್ಯ ರನ್ನು ಫೆ.3ರಂದು ಚೂರಿ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಅಂದು ಮಧ್ಯಾಹ್ನ 1:30ಕ್ಕೆ ತಾನು ಊಟಕ್ಕೆ ತೆರಳಿದ್ದು, ಅಪರಾಹ್ನ 3:44ರ ವೇಳೆಗೆ ಮರಳಿ ಅಂಗಡಿಯ ಬಳಿ ಬಂದು ಕಾರು ನಿಲ್ಲಿಸಿ, ಅಂಗಡಿಯತ್ತ ತೆರಳಿದಾಗ ಮುಖಕ್ಕೆ ಮಾಸ್ಕ್ ಧರಿಸಿದ ಅಪರಿಚಿತ ವ್ಯಕ್ತಿಯೊಬ್ಬ ಪರಾರಿಯಾಗಿದ್ದ ಎಂದು ಜ್ಯುವೆಲ್ಲರಿಯ ಮಾಲಕ ಕೇಶವ ಆಚಾರ್ಯರು ಬಂದರು ಠಾಣೆಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.
ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದ ರಾಘವೇಂದ್ರ ಆಚಾರ್ಯರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಷ್ಟರೊಳಗೆ ಅವರು ಕೊನೆಯುಸಿರೆಳೆದಿದ್ದರು. ಕೊಲೆ ಕೃತ್ಯ ನಡೆಯುವುದಕ್ಕಿಂತ 20 ನಿಮಿಷ ಮೊದಲೇ ವ್ಯಕ್ತಿಯು ಜ್ಯುವೆಲ್ಲರಿ ಅಂಗಡಿಗೆ ಆಗಮಿಸಿರುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಆರೋಪಿಯು ಚಿನ್ನಾಭರಣ ಕಳವು ಮಾಡುವುದಕ್ಕಾಗಿ ಅಂಗಡಿಗೆ ನುಗ್ಗಿರಬೇಕು ಎಂದು ಶಂಕಿಸಲಾಗಿತ್ತು. ಜ್ಯುವೆಲ್ಲರಿಯಲ್ಲಿ ಪ್ರದರ್ಶನಕ್ಕಿಡಲಾಗಿದ್ದ ಚಿನ್ನಾಭರಣದಲ್ಲಿ ಕೆಲವು ನಾಪತ್ತೆಯಾಗಿತ್ತು ಎಂದು ಅಂಗಡಿ ಮಾಲಕ ಕೇಶವ ಆಚಾರ್ಯ ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಅಲ್ಲದೆ ಶಂಕಿತ ಆರೋಪಿಯ ಫೊಟೋವನ್ನು ಬಿಡುಗಡೆಗೊಳಿಸಿದ್ದರು. ಇದೀಗ ಕಾಸರಗೋಡು ಪೊಲೀಸರು ಕೇರಳ ಮೂಲದ ಕೊಯಿಲಾಂಡಿಯ ಶಿಫಾಝ್ ಎಂಬಾತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಮಂಗಳೂರು ಪೊಲೀಸರು ಇನ್ನೂ ಇದನ್ನು ಅಧಿಕೃತಗೊಳಿಸಿಲ್ಲ.