Monday, April 8, 2024

ದಂತ ವೈದ್ಯರ ದಿನ – ಮಾರ್ಚ್ 6

ಮಾರ್ಚ್ 6 ರಂದು ವಿಶ್ವದಾದ್ಯಂತ “ದಂತ ವೈದ್ಯರ ದಿನ” ಎಂದು ಆಚರಿಸಲಾಗುತ್ತದೆ.

ದಂತ ವೈದ್ಯರ ಸೇವೆಯನ್ನು ಸ್ಮರಿಸುತ್ತಾ ಅವರಿಗೊಂದು ಧನ್ಯವಾದ ಅಥವಾ ಅಭಿನಂದನೆ ತಿಳಿಸುವ ಸುದಿನ. ಅದೇಕೋ ದಂತ ವೈದ್ಯರ ಬಗೆಗಿನ ಭಯ ಜನ ಸಾಮಾನ್ಯರಲ್ಲಿ ಇನ್ನೂ ಉಳಿದಿದೆ. ದಂತ ವೈದ್ಯರು ಎಂದರೆ “ನೋವು ಉಂಟು ಮಾಡುವವರು ಎಂಬ ಹಣೆ ಪಟ್ಟಿ ಇನ್ನೂ ಪೂರ್ತಿಯಾಗಿ ಕಳಚಿ ಕೊಂಡಿಲ್ಲ. ತಲೆ ತಲಾಂತರಗಳಿಂದ ದಂತ ವೈದ್ಯರನ್ನು “ಖಳ ನಾಯಕ”ನ ರೀತಿಯಲ್ಲಿ ಚಿತ್ರಿಸಲಾಗಿದೆ ಮತ್ತು ಜನಮಾನಸದಲ್ಲಿ ದಂತ ವೈದ್ಯರ ಬಗ್ಗೆ ಬೀತಿಯ ಕಲ್ಪನೆ ಇನ್ನೂ ತೊಲಗಿಲ್ಲದಿರುವುದೇ ಸೋಜಿಗರ ಮತ್ತು ದೌರ್ಭಾಗ್ಯದ ಸಂಗತಿ. ಯಾವೊಬ್ಬ ವ್ಯಕ್ತಿಯೂ ನೋವಿಲ್ಲದೇ ದಂತ ವೈದ್ಯರ ಬಳಿ ಬರಲು ಹಿಂದೇಟು ಹಾಕುವುದಂತೂ ಸತ್ಯ. ದಂತ ವೈದ್ಯರ ದಂತ ಕುರ್ಚಿ ಮಾತ್ರ ಇನ್ನೂ ಹೆಚ್ಚಿನವರಿಗೆ ಮುಳ್ಳಿನ ಹಾಸಿಗೆಯಾಗಿ ಉಳಿದಿರುವುದೇ ಬಹು ದೊಡ್ಡ ಜೀರ್ಣಿಸಿಕೊಳ್ಳಲಾಗದ ಸತ್ಯ. 1790ರ ಮಾರ್ಚ್ 6 ರಂದು ಅಮೇರಿಕಾದ ಖ್ಯಾತ ದಂತ ವೈದ್ಯ ಜಾನ್ ಗ್ರೀನ್‌ವುಡ್ ಎಂಬಾತ ಪ್ರಪ್ರಥಮ ಬಾರಿಗೆ ಕಾಲಿನಿಂದ ಚಾಲಿತವಾದ ದಂತ ಕುರ್ಚಿಯನ್ನು
ಸಂಶೋಧಿಸಿದರು. ಇದರ ನೆನಪಿಗಾಗಿ ಮಾರ್ಚ್ 6 ನ್ನು ವಿಶ್ವ ದಂತ ವೈದ್ಯರ ದಿನ ಎಂದು ಆಚರಿಸುತ್ತಾರೆ.

ಭಾರತ ದೇಶದಲ್ಲಿ ಡಾ|| ಶಫಿಯುದ್ದೀನ್ ಅಹ್ಮದ್ ಅವರನ್ನು ದಂತ ವೈದ್ಯ ಶಾಸ್ತçದ ಪಿತಾಮಹ ಎಂದೂ, ವಿಶ್ವದಲ್ಲಿ ಡಾ|| ಪಿಯರಿ ಫೌಚಾರ್ಡ್ ಅವರನ್ನು ಆಧುನಿಕ ದಂತ ವೈದ್ಯಕೀಯ ಶಾಸ್ತ್ರದ ಪಿತಾಮಹ ಎಂದೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ವೈಜ್ಞಾನಿಕತೆ ತಂತ್ರಜ್ಞಾನ ಮತ್ತು ಕೌಶಲ್ಯಗಳ ಕೊರತೆಯಿಂದಾಗಿ ದಂತ ವೈದ್ಯಕೀಯ ಕ್ಷೇತ್ರ ಅಂದರೆ ಜನರಲ್ಲಿ ಒಂದು ರೀತಿಯ ಅವ್ಯಕ್ತ ಭಯ ಕಾಡುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ಹೊಸ ಹೊಸ ಆವಿಷ್ಕಾರ ಬಂದಿದೆ. ತಂತ್ರಜ್ಞಾನ ಮತ್ತು ವೈದ್ಯ ವಿಜ್ಞಾನದಲ್ಲಿ ಅಪಾರ ಬದಲಾವಣೆ
ಉಂಟಾಗಿದೆ. ಹಾಗಾಗಿ ದಂತ ವೈದ್ಯಕೀಯ ಕ್ಷೇತ್ರ ಈಗ ಮೊದಲಿನಂತೆ ಉಳಿದಿಲ್ಲ. ದಂತ ವೈದ್ಯಕೀಯ ಆಸ್ಪತ್ರೆ ಎಂದರೆ ಯಾವುದೋ ಹೊಸ ಲೋಕಕ್ಕೆ ಎಂದಂತೆ ಭಾಸವಾಗುವ ರೀತಿಯಲ್ಲಿ ಮಾರ್ಪಾಡಾಗಿದೆ. ವಿಶಾಲವಾದ ಜಾಗ, ಮೆತ್ತನೆಯ ದೇಹದಾಕೃತಿಯ ದಂತ ಕುರ್ಚಿ, ಹವಾನಿಯಂತ್ರಿಕ ವಾತಾವರಣ, ಕಿವಿಗೊಪ್ಪುವ ಲಘು ಸಂಗೀತ, ಹಾಗೇ ಬಹಳಷ್ಟು ಬದಲಾವಣೆ ಉಂಟಾಗಿದೆ. ದಂತ ವೈದ್ಯಕೀಯ ಚಿಕಿತ್ಸೆ ಈಗ ಬರೀ ನೋವು ನಿವಾರಕ ವ್ಯವಸ್ಥೆಗಿಂತಲೂ, ಸೌಂದರ್ಯವರ್ಧಕ ಚಿಕಿತ್ಸೆಯಾಗಿ ಬದಲಾಗಿರುವುದು ಖಂಡಿತವಾಗಿಯೂ ಸತ್ಯ. ಇಷ್ಟೆಲ್ಲಾ ಬದಲವಣೆಯಾಗಿದ್ದರೂ ಜನರು ಮಾತ್ರ ದಂತ ವೈದ್ಯರ ಬಗ್ಗೆ ಇನ್ನೂ ತಪ್ಪು ಕಲ್ಪನೆಗಳನ್ನು ಹೊಂದಿರುವುದು ಸೋಜಿಗವೇ
ಸರಿ. ಅದೇನೋ ಇರಲಿ ನಿಮ್ಮ ನೋವನ್ನು ಶಮನ ಮಾಡುವ ನಿಮ್ಮನ್ನು ಸದಾ ನಗಿಸಲು ಮತ್ತು ಹಸನ್ಮುಖಿಯಾಗಿ ಇರುವಂತೆ
ಶುಭ್ರ ದಂತಪAಕ್ತಿಗಳಿಗಾಗಿ ಸದಾಕಾಲ ಶ್ರಮ ಪಡುವ ದಂತ ವೈದ್ಯರನ್ನು ಸ್ಮರಿಸುವ ಮತ್ತು ಒಂದು ಪುಟ್ಟ ಥ್ಯಾಂಕ್ಸ್ ಹೇಳುವ
ದಿನ ಮಾರ್ಚ್ 6 ಎಂಬುದAತೂ ನಿಜ.

ದಂತ ವೈದ್ಯರ ದಿನದ ಸಂದೇಶ:
1. ದಿನಕ್ಕೆರಡು ಬಾರಿ ಕನಿಷ್ಠ ಮೂರು ನಿಮಿಷಗಳ ಕಾಲ ಹಲ್ಲುಜ್ಜಬೇಕು.
2. ದಿನಕ್ಕೊಮ್ಮೆಯಾದರೂ ದಂತದಾರ ಅಥವಾ ದಂತ ಬಳ್ಳಿ ಬಳಸಿ ಹಲ್ಲುಗಳ ಸಂದುಗಳನ್ನು ಶುಚಿಗೊಳಿಸಿ
3. ಕನಿಷ್ಠ ಆರು ತಿಂಗಳಿಗೊಮ್ಮೆ ದಂತ ವೈದ್ಯರನ್ನು ಭೇಟಿ ಮಾಡಬೇಕು. ಹಲ್ಲು ನೋವು ಬಂದಾಗ ಮಾತ್ರ ದಂತ
ವೈದ್ಯರ ಭೇಟಿ ಮಾಡುವುದು ಸರಿಯಾದ ಕ್ರಮವಲ್ಲ.
4. ನೀವು ಸೇವಿಸುವ ಆಹಾರದ ಮೇಲೆ ನಿಗಾ ಇರಲಿ. ಸಮತೋಲಿತ ಮತ್ತು ಹಲ್ಲಿನ ಆರೋಗ್ಯಕ್ಕೆ ಪೂರಕವಾದ ನಾರುಯುಕ್ತ ಹಣ್ಣು ಹಂಪಲು, ಹಸಿ ತರಕಾರಿಯುಕ್ತ ಆಹಾರ ಸೇವಿಸಿ. ಇಂಗಾಲಯುಕ್ತ ಕೃತಕ ಪೇಯಗಳನ್ನು ತ್ಯಜಿಸಬೇಕು. ತಾಜಾ ಹಣ್ಣಿನ ರಸ, ಕಬ್ಬಿನ ಹಾಲು ಎಳನೀರು ಮುಂತಾದ ನೈಸರ್ಗಿಕ ಪೇಯಗಳನ್ನು ಸೇವಿಸಬೇಕು.
5. ಎರಡೂ ಊಟಗಳ ನಡುವೆ ಸಿಹಿ ಪದಾರ್ಥ ಮತ್ತು ಅಂಟು ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ. ಅನಿವರ‍್ಯವಾದಲ್ಲಿ ಸೇವಿಸಿದ ಬಳಿಕ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು.
6. ಪ್ರತಿ ನಿತ್ಯ ರಾತ್ರಿ ಮಲಗುವ ಮುನ್ನ ಮೌತ್‌ವಾಶ್ ಬಳಸುವ ಹವ್ಯಾಸ ಮಾಡಿಕೊಳ್ಳಿ. ಕನಿಷ್ಠ ಪಕ್ಷ ಬಿಸಿ ನೀರಿಗೆ ಒಂದು ಚಿಟಿಕೆ
ಉಪ್ಪುಹಾಕಿ. ಆ ದ್ರಾವಣದಿಂದ ಬಾಯಿ ಶುಚಿಗೊಳಿಸಬೇಕು.
7. ಪ್ರತಿ ವರ್ಷದಲ್ಲಿ ಒಮ್ಮೆಯಾದರೂ ದಂತ ವೈದ್ಯರ ಬಳಿ ಹಲ್ಲು ಶುಚಿಗೊಳಿಸಬೇಕು. ಇದರಿಂದ ಬಾಯಿವಾಸನೆ, ವಸಡಿನ
ಉರಿಯೂತ ಮತ್ತು ವಸಡಿನಲ್ಲಿ ರಕ್ತ ಒಸರುವುದು ನಿಯಂತ್ರಣಕ್ಕೆ ಬರುತ್ತದೆ.
8. ಹಲ್ಲುನೋವು ಬಂದಾಗ ಸ್ವಯಂ ಔಷಧಿಗಾರಿಕೆ ಮಾಡಿಕೊಂಡು ನೋವು ನಿವಾರಕ ಔಷಧಿ ತೆಗೆದುಕೊಳ್ಳುವುದು ಬಹಳ ಅಪಾಯಕಾರಿ. ದಂತ ವೈದ್ಯರ ಸಲಹೆ ಅತೀ ಅಗತ್ಯ.

‘ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ದಂತ ವೈದ್ಯರ ಪಾತ್ರ’ ಒಂದು ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದಲ್ಲಿ ಆ ಸಮಾಜದ
ಪ್ರತಿಯೊಬ್ಬ ವ್ಯಕ್ತಿಯೂ ಪಾಲುದಾರನಾಗುತ್ತಾನೆ ಮತ್ತು ಹೊಣೆಗಾರನಾಗುತ್ತಾನೆ. ಅಂತಹ ಪ್ರತಿ ಪ್ರಜೆಗಳ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. ಅದು ಕುಟುಂಬ ವೈದ್ಯರೇ ಇರಬಹುದು, ಅಲೋಪತಿ, ಆಯುರ್ವೇದ, ಹೊಮಿಯೋಪತಿ, ಯುನಾನಿ ಅಥವಾ ದಂತ ವೈದ್ಯರೂ ಇರಬಹುದು. ಒಟ್ಟಿನಲ್ಲಿ ವೈದ್ಯರು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ನೇರವಾದ ಮತ್ತು ಪ್ರತ್ಯಕ್ಷವಾದ
ಪರಿಣಾಮ ಬೀರುವ ವ್ಯಕ್ತಿ ಅಂದರೆ ವೈದ್ಯರೇ ಆಗಿರುತ್ತಾರೆ. ಇನ್ನು ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಹಲ್ಲಿನ ಆರೋಗ್ಯವೂ ಅತೀ ಅವಶ್ಯಕ. ಬಾಯಿ ಎನ್ನುವುದು ನಮ್ಮ ದೇಹದ ಪ್ರವೇಶ ದ್ವಾರವಿದ್ದಂತೆ. ಜೀರ್ಣಾಂಗ ವ್ಯೂಹದ ಹೊಸ್ತಿಲೇ ನಮ್ಮ ಬಾಯಿ ಆಗಿರುತ್ತದೆ. ಇಂತಹ ಬಾಯಿಯಲ್ಲಿ ಆರೋಗ್ಯವಂತ ಹಲ್ಲುಗಳು ಇಲ್ಲದಿದ್ದಲ್ಲಿ, ಪ್ರಥಮ ಚುಂಬನ ದಂತಭಗ್ನ ಎಂಬಂತೆ ಜೀರ್ಣಾಂಗ ವ್ಯವಸ್ಥೆಯ ಹಳಿ ತಪ್ಪುವುದಂತೂ ಖಂಡಿತಾ. ಹಲ್ಲಿನ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪರಿಪೂರ್ಣವಾಗಲು
ಸಾಧ್ಯವಾಗುತ್ತದೆ. ಈ ಕಾರಣದಿಂದ ಹಲ್ಲುಗಳ ಆರೋಗ್ಯ ನಿರ್ಲಕ್ಷಿಸಿದರೆ, ನಿಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ
ಉಂಟಾಗುವುದು ಸಹಜ.

ದಂತ ವೈದ್ಯರ ಪಾತ್ರ:
ಬಾಯಿ ಎನ್ನುವುದು ಬ್ಯಾಕ್ಟೀರಿಯಾಗಳ ಗುಂಡಿ. ಲಕ್ಷಾಂತರ ಬ್ಯಾಕ್ಟೀರಿಯಗಳು ಮತ್ತು ವೈರಾಣುಗಳು ಬಾಯಿಯಲ್ಲಿ ಮನೆ ಮಾಡಿ ಸಂಸಾರ ನಿರ್ವಹಣೆ ಮಾಡಿಕೊಂಡಿರುತ್ತದೆ. ಯಾವಾಗ ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ, ಅವುಗಳು ತಮ್ಮ ನಿಜರೂಪ ತೋರಿಸುತ್ತದೆ ಮತ್ತು ರೋಗ ಬರುವಂತೆ ಮಾಡುತ್ತದೆ. ಒಬ್ಬ ರೋಗಿ ಬಾಯಿ ತೆರೆದಾಗ, ದಂತವೈದ್ಯರು ಆತನ ಬಾಯಿಯಲ್ಲಿ ಬರೀ ಹಲ್ಲನ್ನು ಮಾತ್ರ ನೋಡುವುದಿಲ್ಲ. ಯಶೋಧೆಯು ಕೃಷ್ಣನ ಬಾಯಿಯನ್ನು ತೆರೆಸಿ (ಮಣ್ಣು ತಿಂದಾಗ) ಬ್ರಹ್ಮಾಂಡವನ್ನು ಕಂಡಳು ಎಂಬುದಾಗಿ ನಮ್ಮ ಪುರಾಣ ಕಥೆಗಳಲ್ಲಿ ದಾಖಲಾಗಿದೆ. ಅದೇ ರೀತಿ ಕಲಿಯುಗದಲ್ಲಿ ರೋಗಿಯು ಬಾಯಿ ತೆರೆದಾಗ ದಂತ ವೈದ್ಯರು ರೊಗಿಯ ಬಾಯಿಯಲ್ಲಿ ಹತ್ತು ಹಲವಾರು ರೋಗದ ಲಕ್ಷಣಗಳನ್ನು ಗುರುತಿಸಿ ರೊಗವನ್ನು ಪತ್ತೆ ಹಚ್ಚುತ್ತಾರೆ.

ರೋಗಿಯ ಬಾಯಿಯಲ್ಲಿ ದಂತ ವೈದ್ಯರು ಪತ್ತೆ ಹಚ್ಚಬಹುದಾದ ರೋಗಗಳು ಯಾವುದೆಂದರೆ ಮಧುಮೇಹ ರೋಗ, ಅಧಿಕ ರಕ್ತದೊತ್ತಡ, ಅನೀಮಿಯಾ ಅಥವಾ ರಕ್ತಹೀನತೆ, ಬಾಯಿ ಕ್ಯಾನ್ಸರ್, ರಕ್ತದ ಕ್ಯಾನ್ಸರ್, ವಿಟಮಿನ್ ಕೊರತೆ, ಶಿಲೀಂದ್ರಗಳ ಸೋಂಕು, ಲಿವರ್
ತೊಂದರೆ, ಗ್ಯಾಸ್ಟಿçಕ್ ಸಮಸ್ಯೆ, ಶ್ವಾಸಕೋಶದ ಕೀವು, ಏಡ್ಸ್ ರೋಗ, ರಕ್ತದ ಕಾಯಿಲೆಗಳು, ಮಾನಸಿಕ ಒತ್ತಡ, ಔಷದಿಗಳ
ದುಷ್ಪರಿಣಾಮ, ಅಪಸ್ಮಾರ ರೋಗ, ಹೆಪಟೈಟಿಸ್, ಜಾಂಡೀಸ್, ವೈರಾಣು ಸೋಂಕು, ಥೈರಾಯ್ಡ್ ಸಮಸ್ಯೆ, ರಸದೂತಗಳ ಏರುಪೇರು,
ಡೆಂಗ್ಯೂ ಜ್ವರ, ಚಿಕುನ್ ಗುನ್ಯಾ ಜ್ವರ ಮತ್ತು ನಿದ್ರಾಹೀನತೆ. ಈ ಎಲ್ಲಾ ರೋಗಗಳು ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ
ರೂಪಗಳಲ್ಲಿ ಬಾಯಿಯಲ್ಲಿ ಪ್ರಕಟಗೊಳ್ಳುತ್ತದೆ. ಉದಾಹರಣೆಗೆ ಮಧುಮೇಹ ರೋಗದಲ್ಲಿ ಹಲ್ಲಿನ ವಸಡಿನ ಸುತ್ತ ಕೀವು ತುಂಬಿ, ಹಲ್ಲಿನ ಸುತ್ತಲಿನ ದಂತದಾರ ಎಲುಬು ಕರಗಿ ಹಲ್ಲು ಅಲುಗಾಡುತ್ತದೆ ಮತ್ತು ಬಾಯಿ ವಿಪರೀತ ವಾಸನೆ ಹೊಂದಿರುತ್ತದೆ. ರಕ್ತಹೀನತೆ ಇರುವವರಲ್ಲಿ ಬಾಯಿ ಒಳ ಭಾಗದ ಪದರ ಬಿಳಿಚಿಕೊಂಡಿರುತ್ತದೆ. ಬಾಯಿ ಕ್ಯಾನ್ಸರ್ ಇದ್ದಲ್ಲಿ ಬಾಯಿಯೊಳಗೆ ಗಡ್ಡೆ ಅಥವಾ ಒಣಗದ ಹುಣ್ಣು ಇರುತ್ತದೆ. ರಕ್ತದ ಕ್ಯಾನ್ಸರ್ ಇದ್ದಲ್ಲಿ ವಸಡಿನಲ್ಲಿ ರಕ್ತ ಒಸರುತ್ತಿರುತ್ತದೆ. ವಿಟಮಿನ್ ಸಿ ಕೊರತೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ ಇದ್ದಲ್ಲಿ ಬೋಳು ನಾಲಗೆ ಇರುತ್ತದೆ. ಶಿಲೀಂಥ್ರಗಳ ಸೋಂಕು ಇದ್ದಲ್ಲಿ ನಾಲಿಗೆ ಮೇಲೆ ಬಿಳಿ ಪದರ ಇರುತ್ತದೆ. ಅದನ್ನು ಕ್ಯಾಂಡಿಡಿಯೋಸಿಸ್ ಎನ್ನುತ್ತಾರೆ. ಸಾಮಾನ್ಯವಾಗಿ ಅತೀ ಹೆಚ್ಚು ಆಂಟಿಬಯೋಟಿಕ್ ಬಳಸುವವರಲ್ಲಿ, ಸ್ಟೀರಾಯ್ಡ್ ಸೇವಿಸುವವರಲ್ಲಿ, ದೇಹದ ರಕ್ಷಣಾ ವ್ಯವಸ್ಥೆ ಕುಸಿದವರಲ್ಲಿ ಇದು ಹೆಚ್ಚು ಕಂಡುಬರುತ್ತದೆ. ಅಧಿಕ ರಕ್ತದೊತ್ತಡ ಮತ್ತು ಅಪಸ್ಮಾರ ರೋಗಕ್ಕೆ ಔಷದಿ ಸೇವಿಸುವವರಲ್ಲಿ ವಸಡುಗಳು ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿದೆ. ಲಿವರ್ ತೊಂದರೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ಮಾನಸಿಕ ಒತ್ತಡ ಇದ್ದಲ್ಲಿ ಬಾಯಿಯಲ್ಲಿ ಹುಣ್ಣು, ಜಾಂಡಿಸ್ ಇದ್ದಲ್ಲಿ ಬಾಯಿ ನಾಲಗೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಡೆಂಗ್ಯೂ ಜ್ವರ ಮತ್ತು ಚಿಕನ್ ಗುನ್ಯಾ ಜ್ವರ ಇದ್ದಲ್ಲಿ ಪ್ಲೇಟ್‌ಲೇಟ್‌ಗಳ ಸಂಖ್ಯೆ ಕಡಿಮೆಯಾಗಿ ವಸಡಿನಲ್ಲಿ ರಕ್ತಸ್ರಾವ ಉಂಟಾಗುತ್ತದೆ. ಗ್ಯಾಸ್ಟಿಕ್ ಸಮಸ್ಯೆ ಇದ್ದಲ್ಲಿ ಹಲ್ಲು ಸವೆದು ಹೋಗಿ ದಂತ ಅತಿ ಸಂವೇದನೆ ಇರುತ್ತದೆ. ಶ್ವಾಸಕೋಶದ ಕೀವು ಮತ್ತು ಸೋಂಕು ಇದ್ದಲ್ಲಿ ವಿಪರೀತ ಬಾಯಿ ವಾಸನೆ ಇರುತ್ತದೆ. ಏಡ್ಸ್ ರೋಗ ಇದ್ದಲ್ಲಿ ನಾಲಗೆ ಮೇಲೆ ಬಿಳಿ ಕೂದಲು ಬೆಳೆಯುತ್ತದೆ.

ಬದಲಾದ ದಂತ ಚಿಕಿತ್ಸೆಯ ಸ್ವರೂಪ ಹಿಂದಿನ ಕಾಲದಲ್ಲಿ ದಂತ ವೈದ್ಯರು ಎಂದರೆ ಕೇವಲ ಹಲ್ಲು ತೆಗೆಯಲು ಮಾತ್ರ ಸೀಮಿತವಾಗಿದ್ದರು. ಆದರೆ ಈಗ ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಬಂದಿದೆ. ಮೂರನೇ ದವಡೆ ಹಲ್ಲಿನ ಒಳಭಾಗ ದಂತ ಮಜ್ಜೆಯ ಒಳಗಿನ ಆಕಾರ ಕೋಶ ಜೀವಕೋಶಗಳಿಂದ ಹೊಸತಾದ ಹಲ್ಲನ್ನು ಸೃಷ್ಟಿ ಮಾಡುವಲ್ಲಿಯವರೆಗೆ ದಂತ ವೈದ್ಯ ವಿಜ್ಞಾನ ಬೆಳೆದಿದೆ. ಈಗ ದಂತ ಚಿಕಿತ್ಸೆ ಕೇವಲ ರೋಗ ಚಿಕಿತ್ಸೆ ಪದ್ಧತಿಯಾಗಿ ಉಳಿಯದೆ, ರೋಗ ಬರದಂತೆ ತಡೆಯುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ.
ನಿಯಮಿತವಾದ ದಂತ ತಪಾಸಣೆ, ದಂತ ಶುಚಿಗೊಳಿಸುವಿಕೆ, ಹಲ್ಲು ತುಂಬಿಸುವಿಕೆಯಿಂದ ಹಲ್ಲು ಹುಳುಕಾಗದಂತೆ ಮಾಡುವ
ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಜೊತೆಗೆ ಸೌಂದರ್ಯ ವರ್ಧಕ ಚಿಕಿತ್ಸೆಯಾಗಿ ಬದಲಾಗಿದೆ. ಹಲ್ಲಿನ ಅಂದವನ್ನು ವಿನೀರ್, ಕಿರೀಟ(ಕ್ರೌನ್) ಮತ್ತು ಹೊಸತಾದ ಸಿಮೆಂಟ್ಗಳಿAದ ತುಂಬಿಸಿ, ವ್ಯಕ್ತಿಯ ನಗುವಿನ ವಿನ್ಯಾಸವನ್ನೇ ಬದಲಿಸಿ, ಆತನ ಜೀವನದ
ದೃಷ್ಟಿಕೋನವನ್ನೇ ಬದಲಾಯಿಸುವ ಕಾಲದಲ್ಲಿ ನಾವಿದ್ದೇವೆ. ಹಿಂಜರಿಕೆ, ಕೀಳರಿಮೆ ಹೋಗಿ ಹೊಸ ಆತ್ಮ ವಿಶ್ವಾಸ ಬಂದು, ಆ ವ್ಯಕ್ತಿಯ ಜೀವನದ ದೃಷ್ಟಿಕೋನ ಬದಲಾಗಿ, ಆತ್ಮ ವಿಶ್ವಾಸ ಹೆಚ್ಚಿ, ಹೊಸತಾದ ಮರುಜನ್ಮ ನೀಡಲಾಗುತ್ತದೆ. ಚಿಕಿತ್ಸೆಗೆ ಹೆಚ್ಚು ಒತ್ತು ನೀಡುತ್ತಿದ್ದ ದಂತ ಚಿಕಿತ್ಸಾ ಪದ್ಧತಿ ಈಗ ಹೆಚ್ಚು ರೋಗ ತಡೆಯುವ ಚಿಕಿತ್ಸೆಯಾಗಿ ಪರಿವರ್ತನೆಯಾಗಿದೆ. ದಂತ ಚಿಕಿತ್ಸಾಲಯಗಳು ಬದಲಾಗಿ ಈಗ ದಂತ ಸ್ಪಾಗಳು ಹುಟ್ಟಿಕೊಂಡಿದೆ. ಒಟ್ಟು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಪರಿಪೂರ್ಣ ಬೆಳವಣಿಗೆಯಲ್ಲಿ ಹಲ್ಲುಗಳ ಪಾತ್ರ ಬಹಳ
ಮುಖ್ಯವಾಗಿದೆ. ಒಟ್ಟಿನಲ್ಲಿ ಸುಂದರ ಸದೃಢವಾದ ಹಲ್ಲುಗಳು ಮನುಷ್ಯನ ಆತ್ಮ ವಿಶ್ವಾಸದ ಮತ್ತು ವ್ಯಕ್ತಿತ್ವದ ಪ್ರತೀಕ. ಸುಂದರವಾಗಿ ನಗಲು, ಆಹಾರ ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡಲು
ಹಲ್ಲಿನ ಆರೋಗ್ಯ ಅತೀ ಅವಶ್ಯಕ. ಈ ನಿಟ್ಟಿನಲ್ಲಿ ವ್ಯಕ್ತಿಯ ಆರೋಗ್ಯ ಪಾಲನೆಯಲ್ಲಿ ದಂತ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಡಾ|| ಮುರಲೀ ಮೋಹನ್‌ಚೂಂತಾರು
MDS,DNB,MOSRCSEd(U.K), FPFA, M.B.A
ಮೊ : 9845135787

[email protected]

More from the blog

ವಿಶ್ವ ಹಿಂದೂ ಪರಿಷತ್, ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ “ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ” ಬೃಹತ್ ಪಾದಯಾತ್ರೆ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್,ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಲೋಕಕಲ್ಯಾಣಾರ್ಥವಾಗಿ "ನಮ್ಮನಡೆ ಪೊಳಲಿ ದೇವಸ್ಥಾನದ ಕಡೆ" ಬೃಹತ್ ಪಾದಯಾತ್ರೆಯು ಭಾನುವಾರ ಮುಂಜಾನೆ ನಡೆಯಿತು. ಬೆಳಗ್ಗಿನ ಜಾವ‌ 5.30 ರ ವೇಳೆಗೆ ಕಡೆಗೋಳಿ ಪೊಳಲಿ ದ್ವಾರ,...

ತುಂಬೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಶ್ರಮಿಸಿದ ಸ್ವಯಂಸೇವಕರಿಗೆ ಕೃತಜ್ಞತಾ ಸಭೆ

ಬಂಟ್ವಾಳ: ದೇವಸ್ಥಾನದ ನಿರ್ಮಾಣ ಮಾಡಿದರೆ,ಸಾಲದು ಅದರ ಪ್ರಭಾವ ಇನ್ನಷ್ಟು ಬೆಳಗಬೇಕಾದರೆ ಭಕ್ತರು ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರದ ಯೋಗಿ ಕೌಸ್ತುಭ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ...

ಪ್ರಶಾಂತ್ ಪುಂಜಾಲಕಟ್ಟೆ ಅವರಿಗೆ ಪಿತೃ ವಿಯೋಗ

ಬಂಟ್ವಾಳ: ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಮಾಲಕರಾದ ಪ್ರಶಾಂತ್ ಪುಂಜಾಲಕಟ್ಟೆ ಅವರ ತೀರ್ಥರೂಪರು, ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ನಿವಾಸಿ ಸಂಜೀವ ಪೂಜಾರಿ( 83) ಅವರು ಅಲ್ಪಕಾಲದ ಅಸೌಖ್ಯದಿಂದ ಎ.6ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ...

ಬಂಟ್ವಾಳ: ನಿಯಮ ಮೀರಿ ಚಾಲನೆ ಮಾಡಿ ಪೋಲೀಸರ ಕೈಗೆ ಸಿಕ್ಕಿಬಿದ್ದರೆ ದಂಡ ಗ್ಯಾರಂಟಿ….

ಬಂಟ್ವಾಳ: ರಸ್ತೆಯಲ್ಲಿ ಟ್ರಾಫಿಕ್ ಪೋಲೀಸರು ದಂಡ ವಸೂಲಿ ಮಾಡುವ ವೇಳೆ ಸುಳ್ಳು ಹೇಳಿಬಚಾವಾಗಲು ಸಾಧ್ಯವಿಲ್ಲ, ಜೊತೆಗೆ ಅಸಭ್ಯ ವರ್ತನೆ ಮಾಡಿದರೆ ಜೋಕೆ, ಅವರ ಶರೀರದಲ್ಲಿ ಕಣ್ಗಾವಲು ಕ್ಯಾಮರಾ ಅಳವಡಿಸಿಲಾಗಿದ್ದು, ಸೂಕ್ಷ್ಮವಾಗಿ ಎಲ್ಲವನ್ನು ಸೆರೆ...