ಬಂಟ್ವಾಳ: ಮಂಚಿ – ಕೊಳ್ಳಾಡು ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಕ್ರೀಡಾಕೂಟ-2023 ಕಾರ್ಯಕ್ರಮ ಫೆ. 12 ರಂದು ಮಂಚಿ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಯನ್ ರಾಮ್ ಪ್ರಸಾದ್ ರೈ ತಿರುವಾಜೆ ತಿಳಿಸಿದರು.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ಳಾಡು ಇಲ್ಲಿನ ಹಿರಿಯ ವಿದ್ಯಾರ್ಥಿ ಸಂಘ (ರಿ) ವತಿಯಿಂದ ಹಿರಿಯ ವಿದ್ಯಾರ್ಥಿಗಳಿಗಾಗಿ ಕ್ರೀಡಾಕೂಟ ಮತ್ತು ಸಹಮಿಲನ ಕಾರ್ಯಕ್ರಮವನ್ನು ಫೆ 12 ಆದಿತ್ಯವಾರದಂದು ಆಯೋಜಿಸಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅಕ್ಷರ ಕಲಿಸಿದ ಶಾಲೆಯ ಋಣ ಇದ್ದೇ ಇರುತ್ತದೆ. ಬದುಕನ್ನು ಕಟ್ಟಿ ಜ್ಞಾನ ಹಾಗೂ ಸ್ವ- ಕೌಶಲ್ಯವನ್ನು ಬೆಳೆಸಿಕೊಳ್ಳಲು ಪೂರಕವಾಗುವ ಶಾಲೆಯ ಕುರಿತಾಗಿ ಗೌರವ ಹಾಗೂ ಅಭಿಮಾನವನ್ನು ಹೊಂದಬೇಕಾದುದು ಆ ಶಾಲೆಯಲ್ಲಿ ಕಲಿತ ಪ್ರತಿಯೊಬ್ಬರಿಗೂ ಇರಬೇಕಾದ ಗುರುತರವಾದ ಜವಾಬ್ದಾರಿ. ಈ ಕಾರಣಕ್ಕಾಗಿ ಹಲವಾರು ವರ್ಷಗಳಿಂದ ವಿದ್ಯಾರ್ಥಿ ಸಂಘ ಕಾರ್ಯಾಚರಿಸುತ್ತಿತ್ತು. ಕಳೆದ ಆಗಸ್ಟ್ 9 ರಂದು ಹಿರಿಯ ವಿದ್ಯಾರ್ಥಿಗಳು ಒಟ್ಟು ಸೇರಿ ನಿರ್ದಿಷ್ಟ ಧೈಯ ಉದ್ದೇಶಗಳನ್ನು ಇಟ್ಟು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆಯೊಂದಿಗೆ ಹಿರಿಯ ವಿದ್ಯಾರ್ಥಿ ಸಂಘವನ್ನು ಮತ್ತೆ ಸಕ್ರಿಯಗೊಳಿಸಿ ವಿದ್ಯಾರ್ಥಿ ಸಂಘವನ್ನು ಕಾನೂನಾತ್ಮಕವಾಗಿ ನೋಂದಾಯಿಸಿಕೊಳ್ಳಲಾಗಿತ್ತು. ಈಗಾಗಲೇ ಹಲವಾರು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಾದ ನಾಯಕತ್ವ ಹಾಗೂ ಭಾಷಾ ಕೌಶಲ ತರಬೇತಿ, ರಕ್ತದಾನ ಶಿಬಿರ, ಬೆಂಕಿಯ ಅನಾಹುತಗಳಿಂದ ರಕ್ಷಣೆ ಕುರಿತು ಕಾರ್ಯಗಾರಗಳನ್ನು ಹಮ್ಮಿಕೊಂಡಿದ್ದೇವು.
ಹಿರಿಯ ವಿದ್ಯಾರ್ಥಿ ಸಂಘವನ್ನು ಬಲಪಡಿಸುವ ದೃಷ್ಟಿಯಿಂದ ದೂರದೂರಿನಲ್ಲಿ ನೆಲೆಸಿರುವ ಹಲವಾರು ಹಿರಿಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿಯಲ್ಲಿ ಕರೆ ತರಬೇಕೆನ್ನುವ ಬಲವಾದ ಉದ್ದೇಶದಿಂದ ಮಂಚಿ ಕೊಳ್ಳಾಡು ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಸಹಮಿಲನ ಹಾಗೂ ಕ್ರೀಡಾಕೂಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಇದೇ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿ, ಪುಣೆ ಮಹಾರಾಷ್ಟ್ರದ ಡಿ ವೈ ಪಾಟೀಲ್ ಅಂತರಾಷ್ಟ್ರೀಯ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಹಾಗೂ ಪ್ರೊಫೆಸರ್ ಡಾ. ಬೀರಾನ್ ಮೊಯ್ದಿನ್ ಬಿ.ಎಂ. ಇವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಯನ್ ರಾಮ್ ಪ್ರಸಾದ್ ರೈ ತಿರುವಾಜೆ ಇವರು ವಹಿಸಲಿದ್ದಾರೆ. ಹಾಗೂ ಅತಿಥಿಗಳಾಗಿ ಫಾದರ್ ಸೈಮನ್ ಡಿಸೋಜಾ, ಡಾ. ನವೀನ್ ಚಂದ್ರ ಕುಲಾಲ್, ಲಯನ್ ಸತೀಶ್ ಆಳ್ವ ಬಾಳಿಕೆ, ಡಾ. ರಾಜೇಶ್ ರೈ ಅಗರಿ ಪಾಲ್ತಾಜೆ, ಡಾ. ಸುರೇಖಾ ಅಮರನಾಥ ಶೆಟ್ಟಿ, ವಿಶ್ವನಾಥ ನಾಯ್ಕ, ಸುಲೈಮಾನ್ ಕೆ., ಪ್ರವೀಣ್ ಕೊಟ್ಟಾರಿ, ರಾಧಾಕೃಷ್ಣ ಭಟ್, ಸುಶೀಲಾ ವಿಟ್ಲ ನಾಗೇಶ್ ಶೆಟ್ಟಿ ಮುಂಬೈ ಇವರು ಭಾಗವಹಿಸಲಿದ್ದು ಹಲವಾರು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪುರುಷರಿಗಾಗಿ ಕ್ರಿಕೆಟ್ , ವಾಲಿಬಾಲ್ , ಹಗ್ಗ ಜಗ್ಗಾಟ ಹಾಗೂ ಮಹಿಳೆಯರಿಗಾಗಿ ತ್ರೋಬಾಲ್, ಹಗ್ಗ, ಜಗ್ಗಾಟ, ಲಕ್ಕಿ ಗೇಮ್ಸ್ ಈ ರೀತಿ ಕ್ರೀಡಾಕೂಟ ಹಾಗೂ ಸಮಾರೋಪ ಸಮಾರಂಭದಲ್ಲಿ ಕ್ರೀಡಾ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಮಂಚಿ ಕೊಳ್ಳಾಡು ಪ್ರೌಢಶಾಲಾ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಪ್ರಧಾನ ಮಾಡಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲಯನ್ ಡಾ. ಎಂ ಗೋಪಾಲಾಚಾರ್ ಮಂಚಿ, ಕಲಾವಿದ ತಾರಾನಾಥ ಕೈರಂಗಳ , ಎಸ್ ಕೃಷ್ಣಪ್ಪ ಸಿಂಗಾರಕೋಡಿ , ನಾಗೇಶ ಸಿ. ಎಚ್. ಇವರಿಗೆ ಗೌರವ ಸನ್ಮಾನ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಶಾಶ್ವತ ಯೋಜನೆ
ಇಲ್ಲಿ ಆಯೋಜಿಸಲಾದ ಹಿರಿಯ ವಿದ್ಯಾರ್ಥಿಗಳ ಸಹಮಿಲನ ಮತ್ತು ಸಂಗ್ರಹವಾದ ನಿಧಿಯಿಂದ ಶಾಶ್ವತ ಯೋಜನೆಯೊಂದನ್ನು ರೂಪಿಸಲಾಗಿದೆ. ಶಾಲಾವರಣದಲ್ಲಿರೋ ಸುಮಾರು 50 ಸೆಂಟ್ಸ್ ಜಾಗದಲ್ಲಿ ಅಡಿಕೆ ಸಸಿಗಳನ್ನು ನಾಟಿ ಮಾಡುವ ಉದ್ದೇಶ ಹೊಂದಲಾಗಿದೆ. ಸುಮಾರು ನಾಲ್ಕು ವರ್ಷಗಳ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಫಲಭರಿತ ಅಡಿಕೆ ತೋಟವನ್ನು ಶಾಲೆಗೆ ಹಸ್ತಾಂತರಿಸುವ ಶಾಶ್ವತ ಯೋಜನೆ ಇದಾಗಿದೆ. ಅಂದಾಜು ಎರಡೂವರೆ ಲಕ್ಷ ರೂಪಾಯಿಗಳ ಒಟ್ಟು ವೆಚ್ಚವನ್ನು ಅಂದಾಜಿಸಿ ಮುಂದಡಿ ಇಡಲಾಗಿದೆ. ಈ ಮೂಲಕ ಗ್ರಾಮೀಣ ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲೆಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗಿದೆ. ಸರಕಾರಿ ಶಾಲೆಗಳನ್ನು ಉಳಿಸಬೇಕು. ನಮ್ಮೂರ ಶಾಲೆಗಳನ್ನು ಮಾದರಿ ಶಾಲೆಯನ್ನಾಗಿಸಬೇಕೆನ್ನುವ ಕನಸು ಹಿರಿಯ ವಿದ್ಯಾರ್ಥಿ ಸಂಘ (8) ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ಳಾಡು ಇದರ ಮುಂದಿದೆ.
ಪತ್ರಿಕಾಗೋಷ್ಠಿಯಲ್ಲಿ ರಮಾನಂದ ನೂಜಿಪ್ಪಾಡಿ, ಕೊಳ್ನಾಡು ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲ ವಿಟ್ಲ, ಉಮ್ಮರ್ ಕುಂಞ, ಹಾ.ಜಿ.ಸುಲೈಮಾನ್ ಜಿ ಮತ್ತಿತರರು ಉಪಸ್ಥಿತರಿದ್ದರು.