ಸುಬ್ರಹ್ಮಣ್ಯ: ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಉಪಳಟ ನೀಡುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಾಕಾನೆಗಳ ನೆರವಿನೊಂದಿಗೆ ನಡೆಸುತ್ತಿರುವ ಕಾರ್ಯಾಚರಣೆ ಮುಂದುವರಿದಿದೆ.
ಮಂಗಳವಾರ ರಾತ್ರಿ ಐತೂರು ಭಾಗದ ತೋಟವೊಂದರಲ್ಲಿ ಆನೆ ಕೃಷಿ ನಾಶ ಮಾಡಿದ ಮಾಹಿತಿಯಂತೆ ಅಲ್ಲಿಗೆ ತಂಡವೊಂದು ತೆರಳಿತ್ತು. ಅಲ್ಲಿನ ರಬ್ಬರ್ ತೋಟವೊಂದರಲ್ಲಿ ಆನೆ ಪತ್ತೆಯಾಯಿತು. ಬುಧವಾರ ಬೆಳಗ್ಗೆ ರೆಂಜಿಲಾಡಿಯಲ್ಲಿದ್ದ ಸಾಕಾನೆಗಳನ್ನು ತಂದು ಕಾರ್ಯಾಚರಣೆ ನಡೆಸಲಾಯಿತು. ಸಂಜೆ ಕಾಡಾನೆಗೆ ಅರಿವಳಿಕೆ ಚುಚ್ಚು ಮದ್ದು ನೀಡಲು ಯತ್ನಿಸಲಾಯಿತಾದರೂ ಒಂಟಿ ಸಲಗ ತಪ್ಪಿಸಿಕೊಂಡಿದೆ. ಬಳಿಕ ಕಾರ್ಯಾಚರಣೆ ಸ್ಥಗಿತ ಮಾಡಿ ಸಾಕಾನೆಗಳನ್ನು ಪೇರಡ್ಕದ ಆನೆ ಶಿಬಿರಕ್ಕೆ ತರಲಾಯಿತು. ಕಾರ್ಯಾಚರಣೆ ವೇಳೆ 2 ಕಾಡಾನೆಗಳ ಇರುವಿಕೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಕಾರ್ಯಾಚರಣೆ ಗುರುವಾರವೂ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ವೀಕ್ಷಿಸಲು ಅಪಾರ ಸಂಖ್ಯೆಯ ಕುತೂಹಲಿಗರು ಆಗಮಿಸುತಿರುವುದರಿಂದ ಕಾರ್ಯಾ ಚರಣೆಗೆ ಹಿನ್ನಡೆಯಾಗಿದೆ ಎನ್ನಲಾಗಿದೆ. ಕಾಡಾನೆ ಇರುವ ಜಾಗ ಪತ್ತೆಹಚ್ಚಿ ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಅಲ್ಲಿ ಜನರು ಸೇರುವುದರಿಂದ ಕಾಡಾನೆ ತನ್ನ ಪಥ ಬದಲಿಸುತ್ತದೆ ಎನ್ನಲಾಗಿದೆ