ಉಜಿರೆ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಆಶ್ರಯದಲ್ಲಿ ಫೆ.15 ರಂದು ಬುಧವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ವ್ಯಸನಮುಕ್ತರ ನವಜೀವನ ಸಮಾವೇಶ ಆಯೋಜಿಸಿದ್ದು, ನಾಲ್ಕು ಸಾವಿರ ವ್ಯಸನಮುಕ್ತರು ಮತ್ತು ಅವರ ಕುಟುಂಬದವರು ಭಾಗವಹಿಸಲಿದ್ದಾರೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಹೇಳಿದರು.
ಅವರು ಜನಜಾಗೃತಿ ವೇದಿಕೆಯ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈವರೆಗೆ ರಾಜ್ಯದೆಲ್ಲೆಡೆ ೧೬೪೪ ಮದ್ಯವರ್ಜನ ಶಿಬಿರಗಳ ಮೂಲಕ ೧,೧೩,೧೦೩ ಮಂದಿಯನ್ನು ವ್ಯಸನಮುಕ್ತರನ್ನಾಗಿ ಮಾಡಲಾಗಿದೆ. ೮ ದಿನಗಳ ಶಿಬಿರದಲ್ಲಿ ಭಜನೆ, ಪ್ರಾರ್ಥನೆ, ಯೋಗಾಭ್ಯಾಸ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಇತ್ಯಾದಿ ಚಟುವಟಿಕೆಗಳ ಮೂಲಕ ಮನಪರಿವರ್ತನೆಯೊಂದಿಗೆ ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿ ಮಾಡಲಾಗುತ್ತದೆ. ಪಾನಮುಕ್ತ ಸಾಧಕರಿಗೆ “ಜಾಗೃತಿ ಅಣ್ಣ ಮತ್ತು ಜಾಗೃತಿ ಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಶಾಲಾ – ಕಾಲೇಜುಗಳಲ್ಲಿ ೧೩,೨೧೧ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ೧೦,೨೧,೨೨೯ ವಿದ್ಯಾರ್ಥಿಗಳಿಗೆ ವ್ಯಸನಮುಕ್ತರಾಗುವ ಬಗ್ಯೆ ಅರಿವು, ಜಾಗೃತಿ ಮೂಡಿಸಲಾಗಿದೆ.
ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಉಪಸ್ಥಿತಿಯಲ್ಲಿ ಇದೇ ೧೫ ರಂದು ಬುಧವಾರ ಧರ್ಮಸ್ಥಳದಲ್ಲಿ ನಡೆಯುವ ಸಮಾರಂಭದಲ್ಲಿ ಜಾಗತಿಕ ಮಟ್ಟದಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಉತ್ತಮ ಸೇವೆ ಮಾಡಿದ ಡಾ. ಥೋಮಸ್ ಸ್ಕರಿಯ ಅವರಿಗೆ “ಜನ ಜಾಗೃತಿ ಜೀವಮಾನ ಸಾಧನಾ ಪ್ರಶಸ್ತಿ” ನೀಡಿ ಗೌರವಿಸಲಾಗುವುದು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವ ವಿ. ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಕೆ. ಹರೀಶ್ ಕುಮಾರ್ ಮತ್ತು ಕೆ. ಪ್ರತಾಪಸಿಂಹ ನಾಯಕ್ ಹಾಗೂ ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮೋನಪ್ಪ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ದ,ಕ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಕಾರ್ಯದರ್ಶಿ ವಿವೇಕ್ ವಿ. ಪಾÊಸ್, ಯೋಜನಾಧಿಕಾರಿಗಳಾದ ಮೋಹನ, ಸುರೇಂದ್ರ, ಯಶವಂತ್, ಜೈವಂತ್ ಪಟಗಾರ್ ಮತ್ತು ತಿಮ್ಮಯ್ಯ ನಾಯ್ಕ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.