ಬಿ.ಸಿ.ರೋಡು : ಕಳೆದ ಕೆಲವು ತಿಂಗಳಿನಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ ೬ ಮೀಟರ್ ನೀರು ಸಂಗ್ರಹಿಸುತ್ತಿದ್ದು ಮಂಗಳೂರಿನ ಜನತೆಗೆ ಇನ್ನು ಎರಡು ತಿಂಗಳು ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ ಅಂಚನ್ ಹೇಳಿದರು.
ಅವರು ಬುಧವಾರ ಮಧ್ಯಾಹ್ನ ತುಂಬೆ ವೆಂಟೆಡ್ ಡ್ಯಾಂ ಬಳಿ ಗಂಗಾದೇವಿಗೆ ಪೂಜೆ ಸಲ್ಲಿಸಿ ನಂತರ ಡ್ಯಾಮ್‌ನ್ನು ವೀಕ್ಷಿಸಿ ಬಾಗಿನ ನೀಡಿದ ನಂತರ ಕರೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಲ್ಲಿ ನೀರು ಅತೀ ಮುಖ್ಯ. ರಾಜ್ಯದಲ್ಲಿಯೇ ನೀರಿನ ಕೊರತೆ ಇಲ್ಲದ ಸ್ಥಳವೆಂದರೆ ಮಂಗಳೂರು. ಕಳೆದ ವರ್ಷ ಮೇ ತಿಂಗಳಿನಲ್ಲಿ ಕಡಿಮೆಯಾಗಿತ್ತು ನಂತರ ಮಳೆಗಾಲ ಬೇಗ ಪ್ರಾರಂಭವಾಗಿದ್ದರಿಂದ ನೇತ್ರಾವತಿಯಲ್ಲಿ ನದಿ ನೀರಿನಿಂದ ಸಂಪೂರ್ಣ ತುಂಬಿದೆ ಎಂದರು.
ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾತನಾಡಿ ಬೇಸಿಗೆ ಪೂರ್ತಿ ಒಳ ಹರಿವು ಸಂಪೂರ್ಣವಾಗಿ ಬರಲಿ, ತುಂಬೆ ವೆಂಟೆಡ್ ಡ್ಯಾಂ ತುಂಬಿ ಹರಿಯಲಿ, ಇದರಿಂದ ಮುಂದಿನ ಬೇಸಿಗೆ ಕಾಲದಲ್ಲಿ ನಗರ ವ್ಯಾಪಿ ಜನರಿಗೆ ನೀರಿನ ಸಮಸ್ಯೆ ತಲೆದೋರದಿರಲಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಪಟ್ಟಣ ಯೋಜನೆ ಮತ್ತು ಸುಧಾರಣಾ ಸ್ಥಾಯಿ ಸಮಿತಿಯ ರತೀಲಾ ಕಾವ, ತೆರಿಗೆ ನಿರ್ವಹಣೆ, ಹಣಕಾಸು ಸ್ಥಾಯಿ ಸಮಿತಿಯ ಕಿಶೋರ್ ಕೊಟ್ಟಾರಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಹೇಮತಲಾ ಸಾಲ್ಯಾನ್, ಲೆಕ್ಕಪತ್ರ ವಿಭಾಗದ ನಯನಾ ಕೋಟ್ಯಾನ್, ಪ್ರತಿಪಕ್ಷ ನಾಯಕ ನವೀನ್ ಆರ್. ಡಿಸೋಜ, ಮಾಜಿ ಮೇಯರ್ ಶಶಿಧರ ಹೆಗ್ಡೆ, ಲ್ಯಾನ್ಸಿ ಪಿಂಟೋ, ವೇದಾವತಿ ತುಂಬೆ ಪಂಚಾಯತ್ ಅಧ್ಯಕ್ಷ ಪ್ರವೀಣ್ ಬಿ. ತುಂಬೆ ಉಪಸ್ಥಿತರಿದ್ದರು.