ಬಂಟ್ವಾಳ: ಬಂಟ್ವಾಳ ಕ್ಷೇತ್ರದ 1706 ಫಲಾನುಭವಿಗಳಿಗೆ 94ಸಿ, ಸಾಗುವಳಿ ಚೀಟಿ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದ್ದು, ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಬಂಟ್ವಾಳದ 24,492 ಫಲಾನುಭವಿಗಳಿಗೆ 24.49 ಕೋ.ರೂ. ಹಾಗೂ ಫಸಲು ಭಿಮಾ ಯೋಜನೆಯಲ್ಲಿ 15.07 ಕೋ.ರೂ. ಬಂದಿರುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಅವರು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ದ.ಕ.ಜಿ.ಪಂ., ದ.ಕ.ಜಿಲ್ಲಾಡಳಿತ ವತಿಯಿಂದ ಬಂಟ್ವಾಳದ ಕ್ಷೇತ್ರದ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸೌಲಭ್ಯ ವಿತರಿಸಿ ಮಾತನಾಡಿದರು. ಒಟ್ಟು ಸುಮಾರು 1960 ಕೋ.ರೂ.ಅನುದಾನದ ಮೂಲಕ ಬಂಟ್ವಾಳದ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗಿದ್ದು, ಬೆಳಕು ಯೋಜನೆಯಲ್ಲಿ ಕ್ಷೇತ್ರದ 1158 ಮನೆಗಳಿಗೆ ವಿದ್ಯುತ್ ಸೌಲಭ್ಯ ನೀಡಲಾಗಿದ್ದು, ಮೊತ್ತ ಬಂದಿರುತ್ತದೆ. ನೀರಿನ ಸೌಲಭ್ಯಕ್ಕಾಗಿ ಕಿಂಡಿ ಅಣೆಕಟ್ಟುಗಳಿಗೆ 268 ಕೋ.ರೂ., ಸಮುದಾಯ ಭವನಗಳಿಗೆ 8 ಕೋ.ರೂ.ಅನುದಾನ ಬಂದಿದೆ.
ಸುಮಾರು 30 ಕೋ.ರೂ.ವೆಚ್ಚದಲ್ಲಿ ನಾರಾಯಣ ಗುರು ವಸತಿ ಶಾಲೆ ಕೂಡ ಬಂಟ್ವಾಳದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ವ್ಯವಸ್ಥೆ, ಐಸಿಯು ಘಟಕ, ಬಂಟ್ವಾಳ ಹಾಗೂ ವಾಮದಪದವಿನಲ್ಲಿ ಆಕ್ಸಿಜನ್ ಘಟಕ ಪುಂಜಾಲಕಟ್ಟೆ ಆಸ್ಪತ್ರೆಯ ಮೇಲ್ದರ್ಜೆ ಕಾಮಗಾರಿಗೆ ಶೀಘ್ರ ಶಿಲಾನ್ಯಾಸ ನಡೆಸಲಾಗುತ್ತದೆ ಎಂದರು.
ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಂಟ್ವಾಳ ತಹಶೀಲ್ದಾರ್ ದಯಾನಂದ ಕೆ.ಎ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಮನಾಥ ರಾಯಿ, ಜಯರಾಮ ನಾಯ್ಕ್ ಕುಂಟ್ರಕಳ, ಗ್ರಾ.ಪಂ.ಗಳ ಅಧ್ಯಕ್ಷರುಗಳಾದ ಸತೀಶ್ ಪೂಜಾರಿ, ಸುರೇಶ್ ಬನಾರಿ, ಸಂಜೀವ ಪೂಜಾರಿ, ಹರ್ಷಿಣಿ ಪುಷ್ಪಾನಂದ, ನಾಗವೇಣಿ, ಲೀಲಾವತಿ ಧರ್ಣಪ್ಪ ಪೂಜಾರಿ, ಸುರೇಶ್ ಮೈರಾ, ವಾಮನ ಆಚಾರ್ಯ, ದಿನೇಶ್, ಗಣೇಶ್ ಪೂಜಾರಿ, ಸುಜಾತ ಆರ್.ಪೂಜಾರಿ, ಯಶೋಧ, ಶಶಿಕಲಾ, ಅಭಿಷೇಕ್ ಶೆಟ್ಟಿ, ಶೇಖರ ಪೂಜಾರಿ ಉಪಸ್ಥಿತರಿದ್ದರು.
ಉಪತಹಶೀಲ್ದಾರ್ ನವೀನ್‌ಕುಮಾರ್ ಬೆಂಜನಪದವು ಸ್ವಾಗತಿಸಿ, ವಂದಿಸಿದರು.