ಬಂಟ್ವಾಳ: ಅಮೂಲಾಗ್ರ ಬದಲಾವಣೆಯೊಂದಿಗೆ ಅಭಿವೃದ್ಧಿಯಲ್ಲಿ ಬಂಟ್ವಾಳ ಕ್ಷೇತ್ರವನ್ನು ಸಂಪೂರ್ಣವಾಗಿ ಬದಲಾಯಿಸಿ ಮಾದರಿ ಕ್ಷೇತ್ರವನ್ನಾಗಿ ರೂಪಿಸಲು ಎಸ್‌ಡಿಪಿಐ ಬದ್ಧವಾಗಿದ್ದು, ಎಲ್ಲಾ ರೀತಿಯ ಪೂರ್ವ ತಯಾರಿಯೊಂದಿಗೆ ಬಂಟ್ವಾಳದಲ್ಲಿ ಚುನಾವಣೆಯನ್ನು ಎದುರಿಸಲು ಪಕ್ಷ ಸನ್ನದ್ಧವಾಗಿದೆ ಎಂದು ಬಂಟ್ವಾಳ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.
ಅವರು ಎಸ್‌ಡಿಪಿಐ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಬಂಟ್ವಾಳ ಕ್ಷೇತ್ರ ಸಮಿತಿಯ ಅಭಿನಂದನಾ ಸಮಾರಂಭದ ವೇಳೆ ಪತ್ರಕರ್ತರ ಜತೆ ಮಾತನಾಡಿದರು.
ನನ್ನ ಮೇಲೆ ಪಕ್ಷ ಭರವಸೆ ಇಟ್ಟು ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಪಕ್ಷದ ಕಾರ್ಯಕರ್ತರು, ನಾಯಕರು ಅದ್ದೂರಿಯ ಸ್ವಾಗತ ನೀಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ ಈವರೆಗೆ ಕ್ಷೇತ್ರವನ್ನು ಪ್ರತಿನಿಽಸಿದ ಶಾಸಕರು, ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ನಿಕಟ ಸ್ಪರ್ಧೆ ನೀಡಲಿದ್ದು, ಎಲ್ಲಾ ಕಾರ್ಯಕರ್ತರು ಸಂಪೂರ್ಣವಾಗಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿಪರ ಕೆಲಸ ಮಾಡಲಿದ್ದಾರೆ ಎಂದರು.
ಬಿ.ಸಿ.ರೋಡಿನ ಬ್ರಹ್ಮರಕೂಟ್ಲು ಟೋಲ್ ಬಳಿಯಿಂದ ಆರಂಭಗೊಂಡ ಅಭ್ಯರ್ಥಿಯ ಸ್ವಾಗತ ಮೆರವಣಿಗೆಯು ಬಿ.ಸಿ.ರೋಡಿನಲ್ಲಿ ಸಾಗಿ ಕೈಕಂಬದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಎಸ್‌ಡಿಪಿಐ ಪ್ರಮುಖರಾದ ಆಲೋನ್ಸ್ ಫ್ರಾಂಕೋ, ರಿಯಾಝ್ ಫರಂಗಿಪೇಟೆ, ಮುನೀಶ್ ಆಲಿ, ಕಲಂದರ್ ಪರ್ತಿಪಾಡಿ, ಶಾಹುಲ್ ಎಸ್.ಎಚ್. ಮೊದಲಾದವರು ಉಪಸ್ಥಿತರಿದ್ದರು.