ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಕ್ಕಳನ್ನು ಹರಕೆ ರೂಪದಲ್ಲಿ ದೇವರಿಗೆ ಒಪ್ಪಿಸುವ ವಿಶಿಷ್ಟ ಸಂಪ್ರದಾಯ ಹೊಂದಿರುವ ಕಾಲಾವಧಿ ಕಜಂಬು ಜಾತ್ರೋತ್ಸವ ನಡೆಯಿತು.
ಶನಿವಾರ ರಾತ್ರಿ ವಿಟ್ಲ ಅರಮನೆಯಿಂದ ಅರಸು ಪ್ರತಿನಿಧಿ ಬಂಗಾರು ಅರಸರು ಆಗಮಿಸಿದ ಬಳಿಕ ಪಲ್ಲಕ್ಕಿ ಉತ್ಸವ ಬಲಿ, ದೇವರಿಗೆ ಪೂಜೆ ನಡೆಯಿತು.
ನಂತರ ದೇಗುಲದ ವಠಾರದಲ್ಲಿರುವ ಜಳಕ ಗುಂಡಿಯಲ್ಲಿ ಮಕ್ಕಳನ್ನು ಸ್ನಾನ ಮಾಡಿಸಿ,ದೇಗುಲದ ಗರ್ಭಗುಡಿಯ ಮೆಟ್ಟಿಲ ಬಳಿ ದೇವರ ಸಮ್ಮುಖದಲ್ಲಿ ಸಾಂಕೇತಿಕವಾಗಿ ಒಪ್ಪಿಸಲಾಗುವುದು. ಬಳಿಕ ಗರ್ಭಗುಡಿಯ ನಾಲ್ಕು ಮೂಲೆಯಲ್ಲಿ ಕುಳಿತುಕೊಂಡಿರುವ ನಾಲ್ಪೋಳು ಎಂದು ಕರೆಯಲ್ಪಡುವ ದೈವ ಸೇವಕರಿಗೆ ಮುಷ್ಟಿ ಹಣ ಸಲ್ಲಿಸಿದರೆ ಕಜಂಬು ಹರಕೆ ಸಂದಾಯ ವಾಗುತ್ತದೆ. ಬಳಿಕ ಅನ್ನ ಭೋಜನ ಪ್ರಸಾದ ವಿತರಣೆಯಾಗುತ್ತದೆ.
ಈ ಬಾರಿ ಐದಾರು ಸಾವಿರಕ್ಕಿಂತಲೂ ಅಧಿಕ ಮಕ್ಕಳು ಕಜಂಬು ಹರಕೆಗೆ ಸಂದಾಯವಾದರು. ಈ ಕ್ಷೇತ್ರದಲ್ಲಿ ಸಂತೆ ಅಥವಾ ಇತರ ಯಾವುದೇ ವ್ಯಾಪಾರ ನಿಷಿದ್ಧವಾಗಿದೆ.