


ಬಂಟ್ವಾಳ: ಬಂಟ್ವಾಳಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರುಗೊಂಡು ಇದೀಗ ಎಂಟು ವರ್ಷದ ಬಳಿಕ ಠಾಣಾ ಕಟ್ಟಡಕ್ಕೆ ನಿವೇಶನಕ್ಕೆ ಕಾಲ ಕೂಡಿಬಂದಿದ್ದು, ಪಾಣೆಮಂಗಳೂರು ಹಳೆ ಸೇತುವೆಯ ಸಮೀಪದಲ್ಲಿ ನಿವೇಶನ ಗುರುತಿಸಿ ಬಹುತೇಕ ಅಂತಿಮಗೊಂಡಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಇನ್ನೊಂದಷ್ಟು ಸಮಯ ಕಾಯಬೇಕಿದೆ.
ಸಂಚಾರ ಠಾಣೆ ಉದ್ಘಾಟನೆಗೊಂಡ ದಿನದಿಂದ ಈತನಕವೂ ಮೆಲ್ಕಾರ್ ಸಮೀಪದ ಬೋಳಂಗಡಿ ಹೆದ್ದಾರಿ ಬದಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಸಾಕಷ್ಟು ಕಡೆಗಳಲ್ಲಿ ಜಾಗ ಗುರುತಿಸಿದರೂ, ಅದು ಠಾಣೆಯ ಕಾರ್ಯನಿರ್ವಹಣೆಗೆ ಸೂಕ್ತವಾಗದ ಹಿನ್ನೆಲೆಯಲ್ಲಿ ಹುಡುಕಾಟ ಮುಂದುವರಿದಿತ್ತು. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಹಳೆಯ ಹೆದ್ದಾರಿ ರಸ್ತೆಯ ಬದಿ ಜಾಗ ಗುರುತಿಸಲಾಗಿದೆ.
ಹಾಲಿ ಸಂಚಾರ ಪೊಲೀಸ್ ಠಾಣೆ ಕಾರ್ಯಾಚರಿಸುತ್ತಿರುವ ಕಟ್ಟಡದ ಮುಂಭಾಗದ ಬಹುತೇಕ ಜಾಗ ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿಗೆ ಹೋಗುತ್ತಿದ್ದು, ಈ ಹೀಗಾಗಿ ಅನಿವಾರ್ಯವಾಗಿ ಠಾಣೆಗೆ ಸ್ವಂತ ಕಟ್ಟಡ ಅತಿ ಅಗತ್ಯವಾಗಿದೆ. ಜತೆಗೆ ಹಾಲಿ ಇರುವ ಕಟ್ಟಡವು ಹಿಂದೆ ಮಳೆಗಾಲದಲ್ಲಿ ಸೋರುತ್ತಿದ್ದು, ಟರ್ಪಾಲು ಹಾಕಿ ಮುಚ್ಚಬೇಕಾದ ಪರಿಸ್ಥಿತಿಯೂ ಇತ್ತು. ಪೊಲೀಸ್ ಠಾಣೆಗಳು ಪ್ರಮುಖ ಹೆದ್ದಾರಿ, ರಸ್ತೆಯ ಪಕ್ಕದಲ್ಲೇ ಇರಬೇಕಾಗಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಜಾಗಗಳನ್ನು ಹುಡುಕಿದರೂ ಠಾಣೆಗೆ ಸೂಕ್ತವಾದ ಸರಕಾರಿ ಜಾಗ ಲಭ್ಯವಾಗಿರಲಿಲ್ಲ.
ಪಾಣೆಮಂಗಳೂರು ಗೂಡಿನಬಳಿಯಲ್ಲಿ ನೇತ್ರಾವತಿ ನದಿ ಕಿನಾರೆಯಲ್ಲಿದ್ದ ಪಶು ಇಲಾಖೆಯ ಹಳೆಯ ಕಟ್ಟಡದ ನಿವೇಶನ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಗೆ ಈಗಾಗಲೇ ಮಂಜೂರಾಗಿತ್ತು. ಆದರೆ ಅಲ್ಲಿ ಠಾಣೆಗೆ ಬೇಕಾದಷ್ಟು ಸ್ಥಳ ಇಲ್ಲದೇ ಇರುವುದರಿಂದ ಅದು ಹಾಗೇ ಉಳಿದುಕೊಂಡಿತ್ತು. ಆದರೆ ಎರಡು ವರ್ಷಗಳ ಹಿಂದೆ ಈ ಪಾಳು ಬಿದ್ದ ಕಟ್ಟಡವನ್ನು ದುರಸ್ತಿಪಡಿಸಿ ಬಂದೋಬಸ್ತ್ ಗೆ ಆಗಮಿಸುವ ಕೆಎಸ್‌ಆರ್‌ಸಿ ಪೊಲೀಸರಿಗೆ ಉಳಿದುಕೊಳ್ಳಲು ಗೆಸ್ಟ್ ರೂಮ್ ರೀತಿಯಲ್ಲಿ ನವೀಕರಣ ಮಾಡಲಾಗಿದೆ.
ಪ್ರಸ್ತುತ ಠಾಣೆಗೆ ಪಾಣೆಮಂಗಳೂರು ಗೂಡಿನಬಳಿ ಸಮೀಪ ಸುಮಾರು 78 ಸೆಂಟ್ಸ್ ಜಾಗ ಅನುಮೋದನೆಗೊಂಡಿದ್ದು, ಪೂರ್ಣ ರೀತಿಯಲ್ಲಿ ಜಾಗವನ್ನು ಠಾಣೆಯ ಹೆಸರಿಗೆ ಬದಲಾಯಿಸುವ ಕಾರ್ಯ ಪ್ರಗತಿಯಲ್ಲಿದೆ. ಸಾಮಾನ್ಯವಾಗಿ ಇತರ ಪೊಲೀಸ್ ಠಾಣೆಗಳಿಗೆ ಸ್ವಲ್ಪವೇ ಜಾಗ ಬೇಕಾದರೂ, ಸಂಚಾರ ಪೊಲೀಸ್ ಠಾಣೆಗೆ ಹೆಚ್ಚಿನ ಜಾಗದ ಅವಶ್ಯಕತೆ ಇರುತ್ತದೆ. ಅಂದರೆ ಅಪಘಾತಗಳು ಸಂಭವಿಸಿದಾಗ ವಾಹನಗಳನ್ನು ಠಾಣೆಯಲ್ಲಿ ತಂದು ನಿಲ್ಲಿಸಬೇಕಾಗುತ್ತದೆ.
ಕೆಲವೊಂದು ಸಂದರ್ಭಗಳಲ್ಲಿ ಇಂತಹ ವಾಹನಗಳು ವರ್ಷಗಟ್ಟಲೆ ಠಾಣೆಯಲ್ಲೇ ಕೊಳೆಯುತ್ತಿರುವ ಉದಾಹರಣೆಗಳೂ ಇವೆ. ಹೀಗಾಗಿ ಈ ಹಿಂದೆ ನೋಡಿನ ಹೆಚ್ಚಿನ ಸ್ಥಳದಲ್ಲಿ ಠಾಣೆಗೆ ಸೂಕ್ತವಾಗದೆ ಬಿದ್ದು ಹೋಗಿತ್ತು. ಆದರೆ ಇದೀಗ ಗುರುತಿಸಿರುವ ಜಾಗದಲ್ಲಿ ಸಂಚಾರ ಠಾಣೆಯ ನೂತನ ಕಟ್ಟಡ ನಿರ್ಮಾಣಗೊಳ್ಳುವುದು ಬಹುತೇಕ ಅಂತಿಮಗೊಂಡಿದೆ.


