ಮಂಗಳೂರು: ಸುರತ್ಕಲ್ ಸಮೀಪದ ಕೃಷ್ಣಾಪುರದಲ್ಲಿ ನಡೆದಿದ್ದ ಅಂಗಡಿ ಮಾಲೀಕ ಜಲೀಲ್ ಕೊಲೆ ಆರೋಪದಲ್ಲಿ ಬಂಧಿತ ನಾಲ್ವರು ಆರೋಪಿಗಳು ಶನಿವಾರ ಮಧ್ಯಾಹ್ನ ಪಕ್ಕದ ಶೇಂದಿ ಅಂಗಡಿ ಬಳಿಕ ಕುಳಿತು ಕೊಲೆಗೆ ಸ್ಕೆಚ್ ಹಾಕಿದ್ದರು ಎಂದು ವರದಿಯಾಗಿದೆ.
ಕೃಷ್ಣಾಪುರ ನೈತಂಗಡಿಯ ಶೈಲೇಶ್ ಯಾನೆ ಶೈಲೇಶ್ ಪೂಜಾರಿ, ಹೆಜಮಾಡಿ ಎನ್.ಎಸ್.ರೋಡ್‌ನ ಸವಿನ್ ಕಾಂಚನ್ ಯಾನೆ ಮುನ್ನ ಮತ್ತು ಕಾಟಿಪಳ್ಳ ಮೂರನೇ ಬ್ಲಾಕ್‌ನ ಪವನ್ ಯಾನೆ ಪಚ್ಚು ಮತ್ತು ಪ್ರಮುಖ ಆರೋಪಿ ಸುರತ್ಕಲ್ ಕೃಷ್ಣಾಪುರ ಕಾಟಿಪಳ್ಳ ನಿವಾಸಿ ಲಕ್ಷ್ಮೀಶ ದೇವಾಡಿಗ ಬಂಧಿತರು.
ಜಲೀಲ್ ಅಂಗಡಿಗೆ ಬರುತ್ತಿದ್ದಾಗ, ಶೈಲೇಶ್ ಬೈಕ್‌ನಲ್ಲಿ ಅಡ್ಡಗಟ್ಟಿದ್ದ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ನಿನ್ನನ್ನು ಕೊಲ್ಲದೆ ಬೀಡುವುದಿಲ್ಲ ಎಂದು ಬೆದರಿಕೆ ಹಾಕಿ ತೆರಳಿದ್ದ. ಬಳಿಕ ಸವಿನ್‌ನನ್ನು ಮನೆಯಿಂದ ಕರೆದುಕೊಂಡು ಬಂದು, ಸುಮಾರು ಏಳು ಗಂಟೆ ವೇಳೆಗೆ ಜಲೀಲ್‌ನನ್ನು ಅಂಗಡಿಯಲ್ಲೇ ಚೂರಿನಲ್ಲಿ ಇರಿದು ಇಬ್ಬರೂ ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಜಲೀಲ್‌ನನ್ನು ಪಕ್ಕದ ಅಂಗಡಿ ಮಹಿಳೆ ರಕ್ಷಿಸುವ ಪ್ರಯತ್ನ ಮಾಡಿದ್ದರು. ಬಳಿಕ ಆಸ್ಪತ್ರೆಗೆ ಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಇನ್ನು ಹತ್ಯೆ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಪವನ್ ಬೈಕ್‌ನಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ, ಬಟ್ಟೆ ಬದಲಾಯಿಸಿ, ಆಟೋ ರಿಕ್ಷಾ ಮೂಲಕ ಸುರತ್ಕಲ್ ಪೇಟೆಗೆ ಬಂದು, ಅಲ್ಲಿಂದ ಕಾಪುವಿಗೆ ತೆರಳಿ, ಲಾಡ್ಜ್‌ನಲ್ಲಿ ತಂಗಿದ್ದರು. ಅಲ್ಲಿಂದ ಕೆಲವರನ್ನು ಸಂಪರ್ಕಿಸಿ ಹಣದ ವ್ಯವಸ್ಥೆ ಮಾಡಿಕೊಂಡು ಮಂಬಯಿಗೆ ಪರಾರಿಯಾಗುವ ಸಿದ್ಧತೆಯಲ್ಲಿದ್ದರು. ಈ ಮಧ್ಯೆ ಭಾನುವಾರ ರಾತ್ರಿ ಮೂವರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.