ಮುಡಿಪು: ಮಂಗಳೂರು ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಬಳಕೆಗೆ ಸಿದ್ದವಾಗಿದ್ದ 39 ಲಕ್ಷ ರೂ. ಮೌಲ್ಯದ 132 ಕೆ.ಜಿ ಸಂಸ್ಕರಿಸಿದ ಗಾಂಜಾ ಹೊಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಟ್ವಾಳದ ರಮೀಜ್ ರಾಜಾ ಮತ್ತು ಮಂಜೇಶ್ವರದ ಅಬ್ದುಲ್ ಹಾರಿಸ್ ಖಾದರ್ ಬಂಧಿತರು ಎಂದು ತಿಳಿದು ಬಂದಿದೆ.

ಇಬ್ಬರೂ ಕೇರಳ ನೋಂದಣಿಯ ಎಸ್‌ಯುವಿ ಕಾರಿನಲ್ಲಿ ವಿಶಾಖಪಟ್ಟಣದಿಂದ ಗಾಂಜಾವನ್ನು ತಂದಿದ್ದರು. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪು ಕಾಯಕೋಡಿ ಎಂಬಲ್ಲಿ ಪೊಲೀಸರು ವಾಹನವನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಆರೋಪಿಗಳು ಬಳಕೆಗೆ ಸಿದ್ದವಾಗಿದ್ದ ಗಾಂಜಾವನ್ನು ಕೇರಳ, ಮಣಿಪಾಲ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ಭಾಗಗಳಿಗೆ ವ್ಯಾಪಾರಿಗಳಿಗೆ ನೀಡಲೆಂದು ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಬಂಧಿತ ಆರೋಪಿಗಳ ಪೈಕಿ ರಮೀಜ್ ರಾಜಾ ವಿರುದ್ದ ಕೊಣಾಜೆ, ಉಳ್ಳಾಲ ಮತ್ತು ಮಂಗಳೂರು ಉತ್ತರ ಠಾಣೆಯಲ್ಲಿ ಕೊಲೆಯತ್ನ, ಹಲ್ಲೆ, ಮಾದಕ ದ್ರವ್ಯ ದಂಧೆ ಸೇರಿದಂತೆ ಏಳು ಪ್ರಕರಣಗಳಿವೆ. ಅಬ್ದುಲ್ ಖಾದರ್ ವಿರುದ್ದ ಉಳ್ಳಾಲ, ಕಾಸರಗೋಡು, ಮಂಜೇಶ್ವರದಲ್ಲಿ ಕೊಲೆ ಯತ್ನ, ಹಲ್ಲೆ, ಮಾದಕದ್ರವ್ಯ ದಂಧೆ ಸೇರಿದಂತೆ ನಾಲ್ಕು ಪ್ರಕರಣಗಳಿವೆ. ಆರೋಪಿಗಳ ಹಿಂದೆ ಮೂರ್‍ನಾಲ್ಕು ಬಾರಿ ವಿಶಾಖಪಟ್ಟಣದಿಂದ ಗಾಂಜಾ ಖರೀದಿಸಿ ಕಾರು, ಮೀನು ಕ್ಯಾರಿಯರ್, ಟ್ರಕ್‌ ಮುಂತಾದ ವಾಹನಗಳಲ್ಲಿ ತಂದಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಬಂಧಿತರಿಂದ ಕಾರು, ಗಾಂಜಾ, ಶಸ್ತ್ರಾಸ್ತ್ರಗಳು, ಮೊಬೈಲ್ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಪೊಲೀಸ್‌ ಆಯುಕ್ತ ಎನ್‌.ಶಶಿಕುಮಾರ್‌ ಅವರು, ಇದೊಂದು ದೊಡ್ಡ ಜಾಲವಾಗಿದ್ದು, ಹಲವು ಜನರು ಸೇರಿಕೊಳ್ಳುತ್ತಿದ್ದಾರೆ. ಅಲ್ಲದೆ ಹೆಚ್ಚಿನ ಬೇಡಿಕೆಯಿದ್ದಾಗ ಅಧಿಕ ಬೆಲೆಗೆ ಕಡಿಮೆ ಪ್ರಮಾಣದಲ್ಲಿ ಅವರು ಮಾರಾಟ ಮಾಡುತ್ತಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದ್ದು, ಹೆಚ್ಚಿನ ತನಿಖೆಯನ್ನು ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here