ಬಂಟ್ವಾಳ: ಪೆರ್ನೆ ಗ್ರಾಮದಲ್ಲಿ ಜಾಗದ ತಕರಾರಿಗೆ ಸಂಬಂಧಿಸಿ ನಡೆದ ಮಾತಿನ ಚಕಮಕಿಯ ವೇಳೆ ಸ್ಥಳೀಯರೊಬ್ಬರು ಮಾನಹಾನಿಕಾರಕ ಶಬ್ದಗಳನ್ನು ಬಳಸಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಭಂಡಾರಿ ಸಮಾಜವನ್ನು ಅವಮಾನಿಸಿ ಜಾತಿ ನಿಂದನೆ ಮಾಡಿದ್ದು, ಆ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಬಂಟ್ವಾಳ ಭಂಡಾರಿ ಸಮಾಜ ಸಂಘವು ಬಂಟ್ವಾಳ ಡಿವೈಎಸ್‌ಪಿ ಅವರ ಮೂಲಕ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಆಗ್ರಹಿಸಿದೆ.
ಪೆರ್ನೆ ಗ್ರಾಮದಲ್ಲಿರುವ ಮೇಗಿನಮನೆ ನಿವಾಸಿಗಳಾದ ಪದ್ಮನಾಭ ಭಂಡಾರಿ, ಉಮಾನಾಥ ಭಂಡಾರಿ ಹಾಗೂ ಪಕ್ಕದ ಜಾಗದ ಅತ್ರಬೈಲು ತಿಮ್ಮಪ್ಪ ಗೌಡ ಅವರಿಗೆ ಜಾಗದ ತಕರಾರಿದೆ. ಇದರ ವಿಚಾರಕ್ಕೆ ನಡೆದ ತಿಮ್ಮಪ್ಪ ಗೌಡ ಅವರು ಮಾತಿನ ಚಕಮಕಿಯಲ್ಲಿ ಜಾತಿ ನಿಂದನೆ, ಮಾನಹಾನಿಕಾರಕ ಶಬ್ದಗಳನ್ನು ಬಳಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.