Saturday, October 21, 2023

ಸಣ್ಣ ನೀರಾವರಿ ಇಲಾಖೆಯಿಂದ ಬಂಟ್ವಾಳ ಕ್ಷೇತ್ರಕ್ಕೆ 262 ಕೋಟಿ ರೂ ಅನುದಾನ ನೀಡಿದ್ದೇನೆ: ಸಚಿವ ಮಾಧುಸ್ವಾಮಿ

Must read

ಬಂಟ್ವಾಳ: ಸಣ್ಣ ನೀರಾವರಿ ಇಲಾಖೆಯಿಂದ 262 ಕೋಟಿ ಅನುದಾನ ಬಂಟ್ವಾಳ ಕ್ಷೇತ್ರಕ್ಕೆ ನೀಡಿದ್ದು, ಮುಂದಿನ ಹಂತದಲ್ಲಿ ಇಲಖೆಯಿಂದ ದ.ಕ.ಜಿಲ್ಲೆಗೆ ಪ್ರಥಮ ಆದ್ಯತೆಯಲ್ಲಿ ಅನುದಾನಗಳನ್ನು ನೀಡುತ್ತೇನೆ ಎಂಬ ಭರವಸೆಯನ್ನು ಕಾನೂನು ಸಂಸದೀಯ ಮತ್ತು ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಅವರು ಜಕ್ರಿಬೆಟ್ಟುವಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ವಿಶೇಷ ಪ್ರಯತ್ನದ ಅತೀ ಹೆಚ್ಚು ಅನುದಾನದ ಪ್ರಥಮ ನೀರಾವರಿ ಯೋಜನೆಯಾದ ರೂ.135 ಕೋಟಿ ಅನುದಾನದ ಬಂಟ್ವಾಳ ಜಕ್ರಿಬೆಟ್ಟುವಿನಿಂದ ನರಿಕೊಂಬು ಸಂಪರ್ಕ ಸೇತುವೆ ಹಾಗೂ ಕುಡಿಯುವ ನೀರಿನ ಅಣೆಕಟ್ಟು ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಇಲಖೆಯಿಂದ 4000 ಸಾವಿರ ಕೋಟಿ ರೂ ಅನುದಾನವನ್ನು ಬಜೆಟ್ ನಲ್ಲಿ ಇಡಲಾಗಿದ್ದು, ಪ್ರತಿ ವರ್ಷ ಸುಮಾರು 500 ಕೋಟಿ ರೂ ಅನುದಾನವನ್ನು ದ.ಕ‌.ಉಡುಪಿ ಜಿಲ್ಲೆಗಳಲ್ಲಿ ನೀರಿನ ಅಂತರ್ಜಲ ವೃದ್ದಿಗಾಗಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ವಿನಿಯೋಗ ಮಾಡಿದ್ದೇವೆ. ಮಂಗಳೂರಿನ ಹರೇಕಲ ಬಂಟ್ವಾಳ ಜೊತೆ ಒಟ್ಟು ಮೂರು ಕಡೆಗಳಲ್ಲಿ ಅಣೆಕಟ್ಟು ನಿರ್ಮಾಣದ ಮೂಲಕ 2050 ರ ಇಸವಿವರೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಅಭಾವವಾಗಬಾರದು ಎಂಬ ನಿಟ್ಟಿನಲ್ಲಿ ಅನುದಾನ ನೀಡಲಾಗಿದೆ. ಕೃಷಿ ಜೊತೆ ಕುಡಿಯುವ ನೀರಿನ ಸರಬರಾಜು ಮಾಡುವ ಪ್ರಯತ್ನ ಇದಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ಮುಂದಿನ ಪೀಳಿಗೆಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಇರುವ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ವ್ಯಯವಾಗುವುದನ್ನು ತಪ್ಪಿಸಿ ಶೇಖರಣೆ ಮಾಡುವ ಕೆಲಸ ನಮ್ಮಿಂದ ಆಗಬೇಕಾಗಿದೆ. ಸಮುದ್ರದ ಉಪ್ಪು ನೀರಿನ್ನು ಬಳಕೆ ಮಾಡುವ ಯೋಜನೆಗೆ ಸಂಬಂಧಿಸಿದ ತಯಾರಿಗಳು ನಡೆಯುತ್ತಿದ್ದು, ಅನೇಕ ಕಡೆಗಳಲ್ಲಿ ಇದರ ಪ್ರಯೋಜನ ಪಡೆಯಲು ಪ್ರಾಥಮಿಕ ಕೆಲಸ ಕಾರ್ಯಗಳು ಮುಗಿದಿವೆ ಎಂದರು.

ಅಂತರ್ಜಾಲ ವೃದ್ದಿಗಾಗಿ ಬೆಂಗಳೂರಿನಲ್ಲಿ ಶುದ್ದೀಕರಣ ಮಾಡಿದ ನೀರನ್ನು ಕೊಲಾರ ಚಿಕ್ಕಬಳ್ಳಾಪುರ ಎರಡು ಜಿಲ್ಲೆಗಳಿಗೆ ತುಂಬಿದ್ದೇವೆ. ವೈಜ್ಞಾನಿಕ ಅಧ್ಯಯನ ಮೂಲಕ ಕರ್ನಾಟಕದಲ್ಲಿ ಅಂತರ್ಜಲ ವೃದ್ದಿಗಾಗಿ ಹಲವಾರು ಯೋಜನೆ ಗಳನ್ನು ಜಾರಿ ಮಾಡಿದ್ದೇವೆ.
ಕಾರ್ಲೆಂಡ್, ವೆಂಟೆಡ್ ಡ್ಯಾಂ ಮತ್ತು ಟ್ರೀಟಡ್ ಸ್ಕೀಮ್ ಮೂಲಕ ಯಶಸ್ವಿಯಾದ ನೀರಾವರಿ ಇಲಾಖೆಯ ಕಾರ್ಯವೈಖರಿಗಾಗಿ ಕೇಂದ್ರದಿಂದ ಅನುದಾನ ನೀಡಲು ಸಿದ್ದರಾಗಿದ್ದಾರೆ. ನೀರಿಗೆ ಶಕ್ತಿ ನೀಡಬೇಕಾದ ಕಾರ್ಯವನ್ನು ಬಿಜೆಪಿ ಸರಕಾರ ಮಾಡುವ ಮೂಲಕ ಗ್ರಾಮದಲ್ಲಿ ಸುಖಿ ಬದುಕು ನಿರ್ಮಾಣ ಕಾರ್ಯ ಮಾಡಿದ್ದೇವೆ. ದ.ಕ.ಜಿಲ್ಲೆಯ ಜನರ ಮೇಲೆ ವಿಶೇಷ ಪ್ರೀತಿ ಇದೆ. ನಿಮ್ಮ ಪ್ರೀತಿ ಗೆ ನಾವು ಎಷ್ಟು ಸರಕಾರದ ಯೋಜನೆಗಳನ್ನು ನೀಡಿದರು ಕಡಿಮೆ..ಬಹಳ ಒಳ್ಳೆಯ ಜನ ಎಂಬ ಸಂತಸ ಇದೆ, ನೀರಾವರಿ ಇಲಾಖೆ ಯೋಜನೆಯ ಪ್ರಥಮ ಆದ್ಯತೆ ಯನ್ನು ಈ ಭಾಗಕ್ಕೆ ನೀಡುತ್ತೇನೆ ಎಂಬ ಭರವಸೆ ನೀಡಿದರು.

ಡ್ರೀಮ್ಡ್ ಪಾರೆಸ್ಟ್ ಸಮಸ್ಯೆ ಯನ್ನು ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ, ಇದರ ಜೊತೆಗೆ ಜಿಲ್ಲೆಯ ಮರಳು ಸಮಸ್ಯೆ ಜೊತೆ ಇತರ ಅನೇಕ ಸಮಸ್ಯೆ ಗಳನ್ನು ಬಗೆಹರಿಸಲು ಮಂತ್ರಿಗಳ ಜೊತೆಗೆ ಮಾಡಿದ್ದೇವೆ ಎಂದು ಹೇಳಿದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೃಷಿಗೆ ನೀರು ಸರಬರಾಜು ಮಾಡುವ ಮಹತ್ವದ ಯೋಜನೆ ಇದಾಗಿದೆ ಎಂದು ಅವರು ಹೇಳಿದರು. ಇದರ ಜೊತೆಯಲ್ಲಿ ಗ್ರಾಮ ಗ್ರಾಮದಲ್ಲಿ ಚೆಕ್ ಡ್ಯಾಂ ಗಳ ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಕೃಷಿಗೆ ಹೆಚ್ಚಿನ ಸಹಕಾರಿಯಾಗಲಿದ್ದು, ಶೀಘ್ರವಾಗಿ ಎಲ್ಲಾ ಚೆಕ್ ಡ್ಯಾಂ ಗಳ ಉದ್ಘಾಟನೆ ನಡೆಯಲಿದೆ ಎಂದು ಅವರು ಹೇಳಿದರು.

ತಾಲೂಕಿನಲ್ಲಿ ಕೋಟ್ಯಾಂತರ ರೂ ಅನುದಾನಗಳ ಮೂಲಕ ಗ್ರಾಮ ಗ್ರಾಮಗಳ ಅಭಿವೃದ್ಧಿ ಯನ್ನು ಮಾಡಲಾಗುತ್ತಿದೆ.
ತಾಲೂಕಿನ ಜನರಿಗೆ ಕುಡಿಯುವ ನೀರಿಗೆ ಹಾಗೂ ಕೃಷಿಗೆ ಪೂರಕವಾಗುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆ ಗಳನ್ನು ಸರಕಾರ ಜಾರಿ ಮಾಡಿದ್ದು, ಅಭಿವೃದ್ಧಿಗೆ ಕಾರಣವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಮುಖ್ಯ ಇಂಜಿನಿಯರ್ ರಾಘವನ್ , ಸ್ಮಿತಾರಾಮು, ನಗರ ನೈರ್ಮಲ್ಯ, ಒಳಚರಂಡಿ ನಿಗಮ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಕಾರ್ಯಪಾಲಕ ಇಂಜಿನಿಯರ್ ಗೋಕುಲ್ ದಾಸ್, ವಿಷ್ಟುಕಾಮತ್, ಸಹಾಯಕ ಇಂಜಿನಿಯರ್ ಶಿವಪ್ರಸನ್ನ, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ವಿನುತಾಪುರುಷೋತ್ತಮ, ಗುತ್ತಿಗೆದಾರ ರಾಘವೇಂದ್ರ ಕಾರಂತ ಉಪಸ್ಥಿತರಿದ್ದರು.

ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಸ್ವಾಗತಿಸಿ ದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

More articles

Latest article