ವಿಟ್ಲ: ವಿಟ್ಲ ದೇವತಾ ಸಮಿತಿ ವತಿಯಿಂದ 51ನೇ ವರ್ಷದ ಸಾರ್ವಜನಿಕ ವಿಟ್ಲ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಅವರು ಜ್ಞಾನದ ಕೊರತೆ ಇದೆ. ಅದನ್ನು ಕಲಿಸುವ ಕೆಲಸ ನಡೆಯಬೇಕು. ಜ್ಞಾನ ಸಂಕೇತವಾಗಿ ಶಾರದೆಯ ಆಚರಣೆ ಆಗುತ್ತಿದೆ. ಇದು ಶಕ್ತಿಯ ಆರಾಧನೆಯಾಗಿದೆ. ದೇಶ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದು, ಶಕ್ತಿಯ ಆರಾಧನೆ ಅಗತ್ಯವಾಗಿದೆ. ಹಿಂದುತ್ವದ ವಿರುದ್ಧವಾಗಿ ಯೋಚನೆಗಳು ನಡೆಯುತ್ತಿದೆ. ನಮ್ಮ ಅಕ್ಕಪಕ್ಕದಲ್ಲಿ ಭಯೋತ್ಪಾದಕರು ಇದ್ದಾರೆ. ಮುಂದಿನ ದಿನಗಳಲ್ಲಿ ಶಾರದೋತ್ಸವಕ್ಕೆ ಅಡ್ಡಿಯಾಗುವ ಸಾಧ್ಯತೆಗಳಿವೆ. ದೇವರ ಮೆರವಣಿಗೆಗೆ ಅಡ್ಡಿಯಾಗಲಿದೆ. ಶಕ್ತಿಯುತ, ಸಂಘಟಿತ ಹಿಂದೂ ಸಮಾಜ ಆಗಬೇಕು. ಶಾರದೆಯ ಪ್ರತಿಷ್ಠಾಪನೆ ಎಂಬುದು ಬಡವರ ಸೇವೆಯಾಗಿದೆ. ಅಶಕ್ತರನ್ನು ಗುರುತಿಸುವ ಕೆಲಸ ನಡೆಯಬೇಕು. ಜಾತಿ ನೋಡದೇ ನಾವೆಲ್ಲರೂ ಹಿಂದೂ ಎಂದು ನೋಡಿ ಸಹಾಯ ಮಾಡಬೇಕು. ದೇವಸ್ಥಾನಗಳು ಹಿಂದೂ ಸಮಾಜದ ಪರಿವರ್ತನೆ ಕೇಂದ್ರವಾಗಬೇಕು. ಹಿಂದೂ ಸಮಾಜದ ರಕ್ಷಣೆ ಮಾಡಿದಾಗ ಇಡೀ ದೇಶವನ್ನು ರಕ್ಷಣೆ ಮಾಡಿದಂತೆ ಎಂದರು.
ಬೆಳಿಗ್ಗೆ ವಿಟ್ಲ ಜೈನ ಬಸದಿ ಬಳಿಯಿಂದ ವಿಟ್ಲ ಮುಖ್ಯ ರಸ್ತೆಯಲ್ಲಿ ಶ್ರೀ ಶಾರದೆ ಮೂರ್ತಿಯ ಮೆರವಣಿಗೆ ಸಾಗಿತು. ವಿಟ್ಲ ಅನಂತೇಶ್ವರ ದೇವಸ್ಥಾನದ ಅನಂತ ಸದನದಲ್ಲಿ ದೇವರ ಪ್ರತಿಷ್ಠೆ ನಡೆಯಿತು. ವಿಟ್ಲ ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಧ್ವಜಾರೋಹಣಗೈದರು. ವೆಂಕಟೇಶ್ ಭಟ್ ಮತ್ತು ಶೀನ ಕಾಶಿಮಠ, ಅವರನ್ನು ಸನ್ಮಾನಿಸಲಾಯಿತು.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್, ದೇವತಾ ಸಮಿತಿಯ ಹಿರಿಯ ಸದಸ್ಯ ಎಂ ನಿತ್ಯಾನಂದ ನಾಯಕ್, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ನಾಯಕ್ ಉಪಸ್ಥಿತರಿದ್ದರು.
ಪ್ರೇಮಾನಂದ ಭಟ್ ಪ್ರಾರ್ಥಿಸಿದರು. ದೇವತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಗೋಕುಲ್ ದಾಸ್ ಶೆಣೈ ವಂದಿಸಿದರು. ನಟೇಶ್ ವಿಟ್ಲ, ರಾಘವೇಂದ್ರ ಪೈ ಕಾರ್ಯಕ್ರಮ ನಿರೂಪಿಸಿದರು.