ಮಂಗಳೂರು: ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡಲು ವಿರೋಧ ವ್ಯಕ್ತಪಡಿಸಿ, ಸಾವರ್ಕರ್ ಬದಲಾಗಿ ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯ ಹೆಸರಿಡಲು ಮುಸ್ಲಿಮರು ಮನವಿ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಶಾಸಕ ಭರತ್ ಶೆಟ್ಟಿಗೆ ಕೌಂಟರ್ ಕೊಟ್ಟಿದ್ದಾರೆ.

ಮುಸ್ಲಿಂ ಐಕ್ಯತಾ ವೇದಿಕೆಯು ಸುರತ್ಕಲ್ ವೃತ್ತಕ್ಕೆ ಕೋಟಿ ಚೆನ್ನಯ್ಯ ಹೆಸರಿಡಿ ವೀರ ಸಾವರ್ಕರ್ ಏಕೆ? ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮುಸ್ಲಿಂ ಐಕ್ಯತಾ ವೇದಿಕೆ ಪಾಲಿಕೆ ಕಮಿಷನರ್ ಮತ್ತು ಮೇಯರ್ ಗೆ ಮನವಿ ಸಲ್ಲಿಸಿದ್ದು, ತುಳುನಾಡಿನ ದೈವಿಕ ಶಕ್ತಿಗಳಾದ ಕೋಟಿ ಚೆನ್ನಯರ ಹೆಸರಿಡುವಂತೆ ಮನವಿ ಮಾಡಿದ್ದಾರೆ. ಕೋಟಿ ಚೆನ್ನಯ್ಯರ ಹೆಸರಿನ ಜೊತೆ ನವ ಮಂಗಳೂರು ನಿರ್ಮಾತೃ ಶ್ರೀನಿವಾಸ ಮಲ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಎಂ.ಲೋಕಯ್ಯ ಶೆಟ್ಟಿ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಜೊತೆಗೆ ವಿವಾದಿತ ವ್ಯಕ್ತಿಗಳ ಹೆಸರಿಟ್ಟರೆ ಕೋಮು ಸೌಹಾರ್ದ ಹಾಳಾಗುವ ಸಾಧ್ಯತೆ ಅಂತ ಮನವಿ ಮಾಡಿದ್ದಾರೆ
ಸದ್ಯ ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಸುರತ್ಕಲ್ ಗೆ ಸಾವರ್ಕರ್ ಹೆಸರಿಡಲು ಪ್ರಸ್ತಾವನೆ ಸಲ್ಲಿಸಿದ್ದ ಶಾಸಕ ಭರತ್ ಶೆಟ್ಟಿ ಅವರ ಪ್ರಸ್ತಾಪ ಪಾಸ್ ಆಗಿದೆ. ಇದರ ನಡುವೆ ಮುಸ್ಲಿಂ ಐಕ್ಯತಾ ವೇದಿಕೆಯ ಮನವಿ ಪತ್ರ ಬಂದ ಹಿನ್ನೆಲೆ ಸಾರ್ವಜನಿಕ ಆಕ್ಷೇಪಣೆ ಮತ್ತು ಸಲಹೆ ಪಡೆಯಲು ಪಾಲಿಕೆ ಮುಂದಾಗಿದೆ. ಇನ್ನು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸೋ ಮುನ್ನವೇ ಮುಸ್ಲಿಮರು ಆಕ್ಷೇಪ ಹೊರ ಹಾಕಿದ್ದು, ಯಾವುದೇ ಮುಸ್ಲಿಂ ಹೆಸರು ಸೂಚಿಸದೇ ಮೂವರ ಹೆಸರುಗಳನ್ನು ಸೂಚಿಸುವ ಮೂಲಕ ಅಚ್ಚರಿ ನಡೆ ಪ್ರದರ್ಶಿಸಿದ್ದಾರೆ.