ಬೆಂಗಳೂರು: ಓಲಾ, ಉಬರ್, ಆಟೋ, ಕ್ಯಾಬ್ಗಳ ಕಂಪನಿಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರ ಬಳಿ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಓಲಾ- ಊಬರ್ ಕಂಪನಿಗಳಿಗೆ ಸಾರಿಗೆ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳ ಕನಿಷ್ಟ ದರ 30 ರೂ. ಇರಬೇಕು. ಕಾಯುವಿಕೆಯ ಚಾರ್ಜ್ ಅನ್ನು ಪ್ರತಿ 5 ನಿಮಿಷಕ್ಕೆ 5 ರೂ.ಗಳಂತೆ ನಿಗದಿ ಪಡಿಸಲಾಗಿತ್ತು. ಆದರೆ, ಸಾರಿಗೆ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ 100 ರೂ.ಗಳಷ್ಟು ಹಣ ವಸೂಲಿ ಮಾಡಲಾಗುತ್ತಿದೆ. ಆ್ಯಪ್ ಆಧಾರಿತ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳು ಪ್ರಯಾಣಿಕರ ಬಳಿ ಸುಲಿಗೆ ಮಾಡುತ್ತಿರುವುದರಿಂದ ಆ್ಯಪ್ ಆಧಾರಿತ ಸಂಸ್ಥೆಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಸಾರಿಗೆ ಇಲಾಖೆಯಿಂದ ಆ್ಯಪ್ ಆಧಾರಿತ ಓಲಾ ಮತ್ತು ಊಬರ್ ಕಂಪನಿಗೆ ನೋಟೀಸ್ ಜಾರಿ ಮಾಡಲಾಗಿದೆ.
ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಈ ವಿಚಾರವಾಗಿ ವಿವರಣೆ ನೀಡುವಂತೆ ಸಾರಿಗೆ ಇಲಾಖೆ 3 ದಿನಗಳ ಗಡುವು ನೀಡಿದೆ. ಆ್ಯಪ್ ಆಧಾರಿತ ಓಲಾ-ಊಬರ್ ನಲ್ಲಿ ಆಟೋ ಸೇವೆ ಸ್ಥಗಿತಗೊಳಿಸುವಂತೆ ಸಾರಿಗೆ ಇಲಾಖೆ ನೋಟಿಸ್ ನೀಡಿದೆ. ಹೀಗಾಗಿ, ಇನ್ಮುಂದೆ ಓಲಾ -ಉಬರ್ ನಲ್ಲಿ ಆಟೋ ಸಿಗೋದು ಅನುಮಾನ ಎನ್ನಲಾಗುತ್ತಿದೆ. ಇನ್ನು ನಿಯಮ ಉಲ್ಲಂಘಿಸಿ ಆಟೋ ರಿಕ್ಷಾಗಳ ಸೇವೆ ಒದಗಿಸಲಾಗುತ್ತಿದೆ. ಹೀಗಾಗಿ ಅಗ್ರಿಗೇಟರ್ ಸೇವೆಯಡಿಯಲ್ಲಿ ಆಟೋ ರಿಕ್ಷಾ ಸೇವೆ ಒದಗಿಸೋದನ್ನು ಸ್ಥಗಿತಗೊಳಿಸುವಂತೆ ನೋಟಿಸ್ ನೀಡಲಾಗಿದೆ. ಹಾಗೇ, ಮೂರು ದಿನದೊಳಗೆ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.