ಬೆಂಗಳೂರು: ಈಗಾಗಲೇ ಕೊಳೆ ರೋಗ ಮತ್ತು ಎಲೆ ಚುಕ್ಕಿ ರೋಗ ಕರ್ನಾಟಕದಾದ್ಯಂತ ವಿಪರೀತ ಹರಡಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಸಮಯದಲ್ಲೇ ಕೇಂದ್ರ ಸರ್ಕಾರದ ವಿಶ್ವಾಸ ದ್ರೋಹದ ಸಾಂಕ್ರಾಮಿಕ ರೋಗ ಇದೀಗ ಅಡಿಕೆ ಬೆಳೆಗಾರರನ್ನು ಆವರಿಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಭೂತಾನ್‌ನಿಂದ ಪ್ರತಿ ವರ್ಷ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಬೇಷರತ್ ಅನುಮತಿ ನೀಡಿ ಅಧಿಸೂಚನೆ ಹೊರಡಿಸಿದೆ. ಇದು ಅಡಿಕೆ ಬೆಳೆ ಮತ್ತು ಅಡಿಕೆ ಬೆಳೆಗಾರರ ಬದುಕಿಗೆ ಬರೆ ಎಳೆದಂತಾಗಿದೆ. ಅಡಿಕೆ ಆಮದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎನ್ನುವ ಬೇಡಿಕೆಗಳನ್ನು ಇಟ್ಟುಕೊಂಡು ನಾಡಿನ ಅಡಿಕೆ ಬೆಳೆಗಾರರು ಪ್ರತಿಭಟನೆಯ ಹಾದಿ ಹಿಡಿದಿರುವ ಹೊತ್ತಲ್ಲೇ ಭೂತಾನ್ ಅಡಿಕೆ ಆಮದಿಗೆ ಒಪ್ಪಿಗೆ ನೀಡುವ ಮೂಲಕ ಕೇಂದ್ರ ಸರ್ಕಾರ ತನ್ನ ಅಹಂಕಾರ ಮೆರೆದಿದೆ ಎಂದು ಕಿಡಿ ಕಾರಿದ್ದಾರೆ.
ಇನ್ನು ವಿದೇಶಿ ಅಡಿಕೆಯ ಆಮದಿನ ಮೇಲಿನ ಅಬಕಾರಿ ಸುಂಕವನ್ನು ಶೇ. 110ರಷ್ಟು ಕಡಿಮೆ ಮಾಡಿ, ನಮ್ಮ ರೈತರು ಬೆಳೆಯುವ ಅಡಿಕೆ ಮೇಲಿನ ಜಿಎಸ್‌ಟಿ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾದಾಗಲೂ ನಾನು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು ಮಾತ್ರವಲ್ಲದೆ ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಬೆಳೆಗಾರರ ಸಂಕಷ್ಟವನ್ನು ಕೇಂದ್ರಕ್ಕೆ ಮನವರಿಕೆ ಮಾಡಿಸುವಂತೆ ಆಗ್ರಹಿಸಿದ್ದೆ. ಆದರೆ ಪ್ರೊಬೆಷನರಿ ಮುಖ್ಯಮಂತ್ರಿ ಮತ್ತು ಸಂಪುಟಕ್ಕೆ ರಾಜ್ಯದ ರೈತರ ಸಂಕಷ್ಟವನ್ನು ಕೇಂದ್ರಕ್ಕೆ ತಲುಪಿಸುವ ಶಕ್ತಿ ಇಲ್ಲವಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಅಡಿಕೆ ಬೆಳೆಗೆ ಕೊಳೆ ರೋಗ, ಹಳದಿ ಎಲೆ, ಚುಕ್ಕೆ ರೋಗವೂ ಕಾಡುತ್ತಿದೆ. ಸಾಲದ್ದಕ್ಕೆ ವಿಪರೀತ ಮಳೆ ಹಾಗೂ ಮಂಗಗಳ ಹಾವಳಿಯಿಂದ ಅಡಿಕೆ ಗೊನೆಗಳು ನೆಲೆಕಚ್ಚುತ್ತಲೇ ಇವೆ. ಇವೆಲ್ಲದರಿಂದ ಸಣ್ಣ ಪುಟ್ಟ ಅಡಿಕೆ ಬೆಳೆಗಾರರು ಬೀದಿಗೆ ಬೀಳುವಂತಾಗಿ, ಮಧ್ಯಮ ಮಟ್ಟದ ಬೆಳೆಗಾರರ ಆದಾಯ ಅಷ್ಟಕಷ್ಟೆ ಎನ್ನುವಂತಾಗಿದೆ. ಇಷ್ಟೆಲ್ಲಾ ಸಂಕಟಗಳ ನಡುವೆ ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರ್ಕಾರ ನಮ್ಮ ಅಡಕೆಯ ಮೇಲೆ ಜಿಎಸ್‌ಟಿ ಹೆಚ್ಚಿಸುತ್ತಾ, ವಿದೇಶದಿಂದ ಬರುವ ಆಮದು ಅಡಕೆ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ ದೇಶಕ್ಕೆ ಮಾರಿ ನೆರೆ ದೇಶಕ್ಕೆ ಉಪಕಾರಿಯಾದಂತಾಗಿದೆ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯ ಗೃಹ ಸಚಿವರೂ ಆಗಿರುವ ಆರಗ ಜ್ಷಾನೇಂದ್ರ ಅವರೇ ಅಡಕೆ ಸಮಸ್ಯೆ ಬಗೆಹರಿಸುವ ಸಲುವಾಗಿ ರಚಿಸಲಾಗಿರುವ ಟಾಸ್ಕ್ ಫೋರ್ಸ್ನ ಅಧ್ಯಕ್ಷರೂ ಅಗಿದ್ದಾರೆ. ಇವರು ಭೂತಾನ್ ಅಡಿಕೆ ಆಮದನ್ನು ವಿರೋಧಿಸಿ ಕೇಂದ್ರಕ್ಕೆ ಖಾರವಾಗಿ ಪ್ರತಿಕ್ರಿಯಿಸುವ ಬದಲಿಗೆ ಆಮದಿನಿಂದ ಏನೂ ನಷ್ಟ ಆಗುವುದಿಲ್ಲ. ಭೂತಾನ್ ದೇಶ ನಮ್ಮ ಸಾಂಪ್ರದಾಯಿಕ ಮಿತ್ರ ಎಂದು ಭಜನೆ ಮಾಡುತ್ತಿದ್ದಾರೆ. ಇಂತಹ ಭಜನೆಗಳು ನಾಡಿನ ರೈತರ ಸಂಕಷ್ಟವನ್ನು ಪರಿಹರಿಸುವುದಿಲ್ಲ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದವರಂತೆ ಗೃಹ ಸಚಿವರು ಮತ್ತು ಸರ್ಕಾರ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.
ಮಿಜೋರಾಂ, ಬರ್ಮಾ, ಮ್ಯಾನ್ಮಾರ್ ಮೂಲಕ ಭಾರತಕ್ಕೆ ಬರುವ ವಿದೇಶಗಳ ಆಮದು ಅಡಿಕೆಯ ಮೇಲೆ ಅಬಕಾರಿ ಸುಂಕ ಹೆಚ್ಚಿಸಬೇಕು ಎಂದು ಸ್ಥಳೀಯ ಅಡಕೆ ಬೆಳೆಗಾರರು ಹತ್ತಾರು ಬಾರಿ ಮನವಿ ಮಾಡಿದ್ದಾರೆ. ಬೆಳೆಗಾರರ ನಿಯೋಗ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಈ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದರೂ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಮನವಿಯನ್ನು ತಿಪ್ಪೆಗೆಸೆದು ಈಗ ಭೂತಾನ್‌ನಿಂದಲೂ ಆಮದು ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟೀಯ ಸಂಘಟನಾ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳೂ ಅಡಿಕೆ ಬೆಳೆಯುವ ಪ್ರದೇಶದವರೇ ಆಗಿದ್ದಾರೆ. ಮಲೆನಾಡು, ಕರಾವಳಿ ಸೇರಿದಂತೆ ಅಡಿಕೆ ಬೆಳೆಯುವ ಜಿಲ್ಲೆಗಳ ಸಂಸದರು, ಸಚಿವರು, ಶಾಸಕರು ಕೂಡ ಬಾಯಿ ಬಿಡುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರೂ ಅಡಿಕೆ ಬೆಳೆಗಾರರಿಗೂ ತಮಗೂ ಸಂಬಂಧವೇ ಇಲ್ಲ ಎಂದು ಕೇಂದ್ರ ಸರ್ಕಾರದ ಜನದ್ರೋಹಕ್ಕೆ ಮೌನ ಸಮ್ಮತಿ ಸೂಚಿಸಿದ್ದಾರೆ. ಇವರೆಲ್ಲರೂ ಸೇರಿ ಅಡಿಕೆ ಬೆಳೆಗಾರರಿಗೆ ಮರಣ ಶಾಸನ ಬರೆಯುತ್ತಿರುವುದು ನಾಚಿಕೆಗೇಡು ಎಂದು ಕಿಡಿ ಕಾರಿದ್ದಾರೆ.