ಧಾರವಾಡ: ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ವಾಣಿ ನುಡಿದಿದ್ದಾರೆ. ಕಾರ್ತಿಕ ಮಾಸದಲ್ಲಿ ಮಳೆ, ರೋಗ, ಭೂಮಿಯಿಂದ ತೊಂದರೆಯಾಗುವ ಲಕ್ಷಣವಿದೆ ಎಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.

ಈ ಹಿಂದೆ ಆಗಸ್ಟ್ ತಿಂಗಳಲ್ಲಿ ಕೋಡಿಮಠದ ಸ್ವಾಮೀಜಿ ಸ್ಫೋಟಕ ಭವಿಷ್ಯ ವಾಣಿ ನುಡಿದಿದ್ದರು. ಅದನ್ನು ನೆನಪಿಸಿಕೊಂಡ ಸ್ವಾಮೀಜಿ, ಈ ಸಂವತ್ಸರ ಪ್ರಾರಂಭದಲ್ಲಿಯೇ ನಾನು ಭವಿಷ್ಯ ಹೇಳಿದ್ದೆ. ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತೆ, ಸಾವು-ನೋವು ಆಗುತ್ತೆ ಅಂತಾ ಹೇಳಿದ್ದೆ. ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ಕುಸಿಯುತ್ತೆ ಎಂದು ಹೇಳಿದ್ದೆ. ಈಗ ನಾವು ಹೇಳಿದಂತೆಯೇ ಆಗಿದೆ. ಇನ್ನು ಮುಂದೆಯೂ ಮಳೆ ಆಗುವ ಲಕ್ಷಣ ಇದೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣವಿದೆ. ಮಳೆ, ರೋಗ, ಭೂಮಿಯಿಂದ ತೊಂದರೆಯಾಗೋ ಲಕ್ಷಣವಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತವೆ. ವಿಷಜಂತುಗಳು ಹೊರಗೆ ಬಂದು ತೊಂದರೆ ಕೊಡುತ್ತವೆ. ಪ್ರಕೃತಿಯಿಂದ ಅಲ್ಲೊಲ ಕಲ್ಲೋಲ ಆಗುತ್ತೆ. ರಾಜ್ಯಕ್ಕೆ ಒಂದು ಅವಘಡ ಆಗಲಿದೆ. ಅದನ್ನು ಕೂಡ ಕಾದು ನೋಡಿ. ಬೆಂಕಿಯಿಂದ ಹೆಚ್ಚೆಚ್ಚು ಸಮಸ್ಯೆ ಆಗಲಿದೆ. ಮತಾಂಧತೆ, ಜಾತೀಯತೆ, ಆಕ್ರೋಶ ಹೆಚ್ಚಾಗುತ್ತದೆ ಎನ್ನುವ ಮೂಲಕ ಕಾರ್ತಿಕ ಮಾಸದಲ್ಲಿ ಗಂಡಾಂತರ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದು ವರ್ಷದಲ್ಲಿ ಕೊರೊನಾ ಹೋಗುತ್ತದೆ. ಹೋಗುವಾಗ ವಿಪರೀತ ಕ್ಷಾಮ, ದುಃಖ ಕೊಟ್ಟು ಹೋಗುತ್ತೆ. ಕುಡಿಯೋದಕ್ಕೆ ನೀರು ಇಲ್ಲದಂತೆ ಮಾಡುತ್ತೆ. ಇತಿಹಾಸದಲ್ಲಿಯೇ ಇಂಥ ಕಾಯಿಲೆ ಬಂದಿಲ್ಲ. ಕಷ್ಟ ಬಂದಾಗ ದೇವರು ಅಂತಾರೆ. ಮಠ, ಮಂದಿರಕ್ಕೆ ಹೋಗುತ್ತಾರೆ. ಆದರೆ ಮಠ, ಮಂದಿರಕ್ಕೂ ಕೊರೊನಾ ಬಂತು. ಜನವರಿವರೆಗೆ ಕೊರೊನಾ ಇರುತ್ತೆ. ಇದಕ್ಕೆ ಮತ್ತೊಂದು ರೂಪದ ಲಕ್ಷಣಗಳು ಇವೆ. ಆದರೂ ಹೋಗುವಾಗ ಬಹಳ ಕಷ್ಟ ಕೊಡುತ್ತದೆ. ಈ ಸಂವತ್ಸರ ಶುಭ ಆಗೋದಿಲ್ಲ ಎಂದಿದ್ದೆ.ದುಷ್ಟ ಪ್ರಾಣಿಗಳಿಂದ ಕಷ್ಟ ಇದೆ. ಹೊರಗಡೆ ಹೋಗುವಾಗ ಬೆತ್ತ ಹಿಡಿದುಕೊಂಡು ಹೋಗಬೇಕು. ಆಶ್ವೀಜದಿಂದ ಯುಗಾದಿವರೆಗೆ ಅಂಗಾಂಗ ಕಾಯಿಲೆ ಹೆಚ್ಚಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.