Tuesday, September 26, 2023

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ವೇಷ ಹಾಕಿ ಮನೆ ಮನೆಗೆ ತೆರಳಿ ಹಣ ಸಂಗ್ರಹ; ಬಂದ ಪೂರ್ತಿ ಹಣದಿಂದ ನೆರವು

Must read

 

ಬಂಟ್ವಾಳ: ಅನಾರೋಗ್ಯ ಪೀಡಿತ ಮಕ್ಕಳಿಗೆ ನೆರವಾಗಬೇಕು, ಬಡ ಯುವತಿಯ ಮದುವೆಗೆ ಕೈಲಾದ ಸಹಾಯ ನೀಡಬೇಕು ಎನ್ನುವ ಉದ್ದೇಶದಿಂದ ಯುವಕನೋರ್ವ ವೇಷ ಹಾಕಿ ಹಣ ಸಂಗ್ರಹಕ್ಕೆ ಮುಂದಾಗಿದ್ದು, ನವರಾತ್ರಿಯ ಈ ಸಂದರ್ಭದಲ್ಲಿ ಪ್ರೇತದ ವೇಷದ ಮೂಲಕ ಮನೆ ಮನೆಗೆ ಭೇಟಿ ನೀಡಲಿದ್ದಾರೆ.


ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ಅವರೇ ಈ ರೀತಿ ನೆರವಾಗಲು ಹೊರಟಿದ್ದು, ಇವರ ಹೃದಯ ವೈಶಾಲ್ಯತೆಗೆ ವ್ಯಾಪಕ ಪ್ರಶಂಸೆಯೂ ಲಭಿಸಿದೆ. ವೇಷ ಹಾಕಿ ಮನೆ ಮನೆ ಸುತ್ತಾಟದ ವೇಳೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ.
ದೇವದಾಸ್ ಅವರು ಈ ಹಿಂದೆಯೂ ೨ ಬಾರಿ ವೇಷ ಹಾಕಿ ಸಂಗ್ರಹಗೊಂಡ ಹಣದಿಂದ ಅಶಕ್ತರಿಗೆ ನೆರವಾಗಿದ್ದು, ಆದರೆ ಕೊರೊನಾ ಕಾರಣಕ್ಕೆ ಎರಡು ವರ್ಷಗಳ ಕಾಲ ವೇಷ ಹಾಕುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಹಿಂದೆ ಒಂದೆರಡು ದಿನ ಕಾಲ ಮಾತ್ರ ವೇಷ ಹಾಕಿದ್ದ ಅವರು ಈ ಬಾರಿ ಹೆಚ್ಚಿನ ಹಣ ಸಂಗ್ರಹದ ಉದ್ದೇಶದಿಂದ ಬರೋಬ್ಬರಿ ಏಳು ದಿನಗಳ ಕಾಲ ವೇಷ ಹಾಕಿ ಸುತ್ತಾಟ ನಡೆಸಲಿದ್ದಾರೆ.
ಸೆ. ೨೯ರಂದು ವೇಷ ಹಾಕಿ ಸುತ್ತಾಟ ಆರಂಭಿಸಿರುವ ಅವರು ಅ. ೫ರ ವರೆಗೆ ವೇಷ ಧರಿಸುತ್ತಾರೆ. ಒಟ್ಟು ಸುಮಾರು ೨೦ ಸಾವಿರ ರೂಪಾಯಿ ಸಂಗ್ರಹದ ಗುರಿ ಹೊಂದಿರುವ ಅವರು ಎರಡು ಅದನ್ನು ಸಮಾನವಾಗಿ ವಿಂಗಡಿಸಿ ಎರಡು ಕುಟುಂಬಕ್ಕೆ ನೆರವು ನೀಡುವ ಗುರಿ ಹೊಂದಿದ್ದಾರೆ. ತಮ್ಮ ಮನೆಯ ಪಕ್ಕದಲ್ಲಿರುವ ಬಡ ಕುಟುಂಬದ ಒಂದೇ ಮನೆಯ ಇಬ್ಬರು ಮಕ್ಕಳ ಕಿಡ್ನಿ ಸಂಬಂಧಿ ಖಾಯಿಲೆಯ ಚಿಕಿತ್ಸೆಗೆ ನೆರವಿನ ಜತೆಗೆ ಪಕ್ಕದ ಗ್ರಾಮದ ಬಡ ಕುಟುಂಬದ ಯುವತಿಯ ಮದುವೆಯ ಸಹಾಯ ನೀಡುವ ಯೋಜನೆ ಹಾಕಿ ಕೊಂಡಿದ್ದಾರೆ.
ಪ್ರೇತದ ವೇಷ ಹಾಕಿ ಸುತ್ತಾಟ ನಡೆಸುವ ಅವರು ತಮ್ಮ ಓಡಾಟಕ್ಕೆ ಪ್ರೇತಕ್ಕೆ ಒಪ್ಪುವ ರೀತಿಯಲ್ಲಿ ವಿಕಾರಗೊಳಿಸಿದ್ದಾರೆ. ಊರಿನಲ್ಲಿ ಸುತ್ತಾಟದ ಸಂದರ್ಭದಲ್ಲಿ ನಾಗರಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲೂ ವೈರಲ್ ಮಾಡಿ ಹೆಚ್ಚಿನ ಹಣ ಸಂಗ್ರಹಕ್ಕೆ ಸಹಕರಿಸಿದ್ದಾರೆ ಎಂದು ದೇವದಾಸ್ ನೀರೊಲ್ಬೆ ವಿವರಿಸುತ್ತಾರೆ.

More articles

Latest article