ಬೆಂಗಳೂರು: ಪಶ್ಚಿಮ ಬಂಗಾಳಕೊಲ್ಲಿಯಲ್ಲಿ ಉಂಟಾದ ಹವಾಮಾನ ಬದಲಾವಣೆಗಳ ಪ್ರಭಾವದಿಂದಾಗಿ ಕರ್ನಾಟಕದಾದ್ಯಂತ ಮುಂದಿನ ಐದು ದಿನ ಮಳೆ ಮುಂದುವರಿಯಲಿದ್ದು, ಐದನೇ ದಿನವಾದ ಅಕ್ಟೋಬರ್ 10ರಂದು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಪಶ್ಚಿಮ ಬಂಗಾಳಕೊಲ್ಲಿ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಅದು ಆಂಧ್ರಪ್ರದೇಶದ ಕರಾವಳಿ ಭಾಗದತ್ತ ಬೀಸುತ್ತಿದೆ. ಮತ್ತೊಂದು ಮೇಲ್ಮೈ ಸುಳಿಗಾಳಿ ಬಂಗಾಳಕೊಲ್ಲಿಯ ದಕ್ಷಿಣ ಭಾಗದಲ್ಲಿ ಉಂಟಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 5ಕೀ.ಮೀ. ಎತ್ತರದಲ್ಲಿದೆ ಎಂದು ಹವಾಮಾನ ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದ್ದಾರೆ.

ಇನ್ನು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಕರಾವಳಿ ಜಿಲ್ಲೆಗಳು ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನ ಅಲ್ಲಲ್ಲಿ ಹಗುರವಾಗಿ ಮಳೆ ಆಗಲಿದೆ. ಕೆಲವೊಮ್ಮೆ ಗುಡುಗು ಮಿಂಚು ಸಹಿತ ಸಾಧಾರಣವಾಗಿ ಮಳೆ ಆಗುವ ಲಕ್ಷಣಗಳು ಇವೆ.
ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಐದನೇ ದಿನ ಅಂದರೆ ಅಕ್ಟೋಬರ್ 10ರಂದು ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಒಟ್ಟು 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರು ಹಾಗೂ ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ತುಮಕೂರು ಯೆಲ್ಲೋ ಅಲರ್ಟ್ ಪಡೆದ ಜಿಲ್ಲೆಗಳಾಗಿದ್ದು, ಇದರ ಹೊರತು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಮುಂದಿನ ಮೂರು ದಿನ ಸಾಮಾನ್ಯವಾಗಿ ಮಳೆ ಬೀಳಲಿದೆ. ಈ ಭಾಗದಲ್ಲಿ ಚಳಿಯ ವಾತಾವರಣವು ಹೆಚ್ಚಿರಲಿದೆ ಎಂದು ತಿಳಿಸಿದ್ದಾರೆ.