ತಿರುವನಂತಪುರ: ಪಿಎಫ್‌ಐ ಹಾಗೂ ಅದರ ಕೆಲ ಅಂಗಸಂಸ್ಥೆಗಳನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ ಬೆನ್ನಲ್ಲೇ ಇದೀಗ ಒಂದೊಂದೇ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಇದೀಗ ಈ ಪಿಎಫ್‌ಐ ಜೊತೆಗೆ ಪೊಲೀಸ್ ಅಧಿಕಾರಿಗಳು ಸಂಪರ್ಕ ಹೊಂದಿದ್ದಾರೆ ಎಂಬ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ.

ಕೇರಳ ಒಂದರಲ್ಲಿಯೇ ಕನಿಷ್ಠ 873 ಪೊಲೀಸ್ ಅಧಿಕಾರಿಗಳು ಪಿಎಫ್‌ಐ ಸಂಘಟನೆಯ ಜತೆ ಸಂಬಂಧ ಹೊಂದಿರುವುದಾಗಿ ಎನ್ಐಎ ಕೇರಳ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ತಿಳಿಸಿದ ವರದಿಯಲ್ಲಿ ಹೇಳಿದೆ. ಇನ್ನು ಉಳಿದ ರಾಜ್ಯಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸಧ್ಯ ಸ್ಪೆಷಲ್ ಬ್ರ್ಯಾಂಚ್, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರಿಗಳ ಜತೆ ಪಿಎಫ್‌ಐಗೆ ನಂಟಿತ್ತು ಎಂದು ಎನ್ಐಎ ಹೇಳಿತ್ತು, ಆದ್ರೆ ಇದೀಗ ಸಬ್ ಇನ್ಸ್‌ಪೆಕ್ಟರ್, ಸ್ಟೇಷನ್ ಹೆಡ್ ಆಫೀಸ್ ಶ್ರೇಣಿ ಮತ್ತು ಸಿವಿಲ್ ಪೊಲೀಸರ ಮೇಲೆ ಎನ್ಐಎ ಕಣ್ಣಿಟ್ಟಿದೆ.
ಅಷ್ಟಕ್ಕೂ ಈ ಪೊಲೀಸ್ ಅಧಿಕಾರಿಗಳು ಹೇಗೆ ಶಾಮೀಲಾಗಿದ್ದರು ಎಂಬ ಬಗ್ಗೆಯೂ ಎನ್ಐಎ ತಿಳಿಸಿದೆ. ಪಿಎಫ್‌ಐ ಕುರಿತು ತನಿಖೆ ನಡೆಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಮಾಡುವ ಯೋಜನೆಗಳ ಕುರಿತು ಇವರೆಲ್ಲರೂ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಪಿಎಫ್‌ಐ ಮೇಲೆ ದಾಳಿಗೂ ಮೊದಲೇ ಅವರು ಎಸ್ಕೇಪ್ ಆಗುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.