ನವದೆಹಲಿ; ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಇಂದು ನಿಧನರಾಗಿದ್ದಾರೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿರುವ 82 ವರ್ಷದ ಮುಲಾಯಂ ಸಿಂಗ್ ಅವರನ್ನು ಆಗಸ್ಟ್ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಕಳೆದ ಭಾನುವಾರ ಅವರ ಆರೋಗ್ಯ ಸ್ಥಿತಿ ವಿಷಮಗೊಂಡಿರುವುದರಿಂದ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿತ್ತು. ಕಳೆದ 7 ದಿನಗಳಿಂದ ಮುಲಾಯಂ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗಿಲ್ಲ ಎಂದು ಮೇದಾಂತ ಆಸ್ಪತ್ರೆ ಹೆಲ್ತ್ ಬುಲೆಟಿನ್ನಲ್ಲಿ ಮಾಹಿತಿ ನೀಡಿತ್ತು.
ಮಾಜಿ ಸಿಎಂ ಮುಲಾಯಂಸಿಂಗ್ ಯಾದವ್, ಸತತ 3 ಬಾರಿ ಉತ್ತರ ಪ್ರದೇಶ ಸಿಎಂ ಆಗಿದ್ದರು. ಅಲ್ಲದೇ ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಸಮಾಜವಾದಿ ಪಕ್ಷದ ಸಂಸ್ಥಾಪಕರಾಗಿದ್ದ ಮುಲಾಯಂ, ಲೋಕಸಭೆಯಲ್ಲಿ ಮೈನ್ಪುರಿ ಕ್ಷೇತ್ರ ಪ್ರತಿನಿಧಿಸುತ್ತಿದ್ದರು. ಲೋಹಿಯಾ ಅನುಯಾಯಿಯಾಗಿದ್ದ ಮುಲಾಯಂ ಸಿಂಗ್, 1975ರ ತುರ್ತು ಪರಿಸ್ಥಿತಿಯಲ್ಲಿ 19 ತಿಂಗಳು ಜೈಲು ಪಾಲಾಗಿದ್ದರು. 1967ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದ್ದ ಅವರು, 8 ಅವಧಿಗೆ ವಿಧಾನಸಭೆ ಸದಸ್ಯರಾಗಿದ್ದರು