Wednesday, April 10, 2024

ಮರೆಯಾದ ವೇದ ವಿದ್ವಾಂಸ ಚೂಂತಾರು ಲಕ್ಷ್ಮೀ ನಾರಾಯಣ ಭಟ್ಟ

ವೈದಿಕ ಪರಂಪರೆಯೆಂದರೆ ಹೇರಿಕೆಯ, ಶೋಷಣೆಯ ಪದ್ಧತಿಯಲ್ಲ. ಅದೊಂದು ಜೀವನ ಕ್ರಮ. ಭಾರತದ ಸನಾತನ ಸಂಸ್ಕೃತಿ ಪರಂಪರೆಯ ಭಾಗವಾಗಿರುವ ವೇದ, ಉಪನಿಷತ್ತು, ಮಹಾಕಾವ್ಯಗಳು ಹಾಗೂ ಧಾರ್ಮಿಕ ಆಚಾರ-ವಿಚಾರಗಳು ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅಂತಹ ಸನಾತನ ಸಂಸ್ಕೃತಿ
ಪರಂಪರೆಯ ಹಿರಿಯ ಕೊಂಡಿಯಾಗಿ ಸುಮಾರು ನಾಲ್ಕು ದಶಕಗಳ ಕಾಲ ಪುರೋಹಿತರಾಗಿ, ಸೇವೆ ಸಲ್ಲಿಸಿದ ವೇದ
ವಿದ್ವಾಂಸರು ಚೂಂತಾರು ಲಕ್ಷ್ಮೀ ನಾರಾಯಣ ಭಟ್ಟರು. ಸುಳ್ಯ ತಾಲೂಕು ಹಾಗೂ ಹೊರ ತಾಲೂಕುಗಳ ಬಹಳಷ್ಟು ಮನೆಗಳ ಆರಾಧನಾ ಪರಂಪರೆಯ ಭಾಗವಾಗಿ, ಧಾರ್ಮಿಕ ಆಚರಣೆಗಳ
ಪುರೋಹಿತರಾಗಿ, ವೃತ್ತಿ ಪಾವಿತ್ರ್ಯವನ್ನು ಕಾಯ್ದುಕೊಂಡು ಬದುಕಿದ ಲಕ್ಷ್ಮೀ ನಾರಾಯಣ ಭಟ್ಟರು, ದಿನಾಂಕ 14-10-2022 ರಂದು ನಮ್ಮನ್ನಗಲಿರುವುದು ಸಂಸ್ಕೃತಿ ಪರಂಪರೆಯ ವಿಭಾಗಕ್ಕೊಂದು ದೊಡ್ಡ ತುಂಬಲಾರದ ನಷ್ಟ.

ಇವರ ತಂದೆ ಚೂಂತಾರು ಮಹಾಲಿಂಗೇಶ್ವರ ಭಟ್ಟ, ತಾಯಿ ತಿರುಮಲೇಶ್ವರಿ. ಮಹಾಲಿಂಗೇಶ್ವರ ಭಟ್ಟರೂ ಓರ್ವ ಪ್ರಸಿದ್ಧ ವೇದ ಪಂಡಿತರು. ಲಕ್ಷ್ಮೀ ನಾರಾಯಣ ಭಟ್ಟರು ಕಳಂಜದ ಕೋಟೆ ಮುಂಡುಗಾರು ಶಾಲೆಯಲ್ಲಿ 5ನೇ ತರಗತಿಯವರೆಗೆ ಶಿಕ್ಷಣ, 8ನೇ ತರಗತಿಯವರೆಗೆ ಉಡುಪಿಯ ಸಂಸ್ಕೃತ ವಿದ್ಯಾಲಯದಲ್ಲಿ ಸಂಸ್ಕೃತ ಶಿಕ್ಷಣವನ್ನು ಪಡೆದಿರುತ್ತಾರೆ. ಅನಂತರ ಕೋಣೆಮ್ಮೆ ವಸಿಷ್ಠಾಶ್ರಮದ ಘನಪಾಠಿ ಮಹಾಲಿಂಗ ಭಟ್ಟರಲ್ಲಿ ಮತ್ತು ಪುಟ್ಟಪರ್ತಿ ಸ್ವಾಮಿ ಸಾಯಿ ಬಾಬಾ ರವರ ಸನ್ನಿಧಿಯಲ್ಲಿ ವೇದಾಧ್ಯಯನ ಮುಗಿಸಿ, 1961 ರಿಂದ ತಂದೆಯ ಪೌರೋಹಿತ್ಯ ವೃತ್ತಿಯನ್ನು ಆರಂಭಿಸಿದರು. ತಂದೆಯ ಆದರ್ಶ ಜೀವನ ಮಾರ್ಗವನ್ನು ಅನುಸರಿಸಿ ಬದುಕು ಕಟ್ಟಿಕೊಂಡವರು ಇವರು. ವೈದಿಕ ವೃತ್ತಿಯೊಂದಿಗೆ ಉತ್ತಮ ಕೃಷಿಕರಾಗಿ, ಪಾಕ ತಜ್ಞತೆಯನ್ನೂ ಹೊಂದಿದವರಾಗಿ, ವೃತ್ತಿ ನಿಷ್ಠೆಯೊಂದಿಗೆ ಸಾವಿರಾರು ಶಿಷ್ಯ-ಬಂಧುಗ¼ ಶ್ರೇಯೋಭಿವೃದ್ಧಿಯಲ್ಲಿ ತನ್ನ ಉತ್ಕರ್ಷೆಯನ್ನು ಕಂಡುಕೊಂಡ ವಿರಳ ವ್ಯಕ್ತಿತ್ವದವರು. ಇವರ ಸೇವೆಯನ್ನು ಗುರುತಿಸಿ ಹಲವಾರು ಶಿಷ್ಯವರ್ಗದವರು ಗೌರವ ಸನ್ಮಾನವನ್ನೂ ಸಮರ್ಪಿಸಿರುವುದು ಉಲ್ಲೇಖನೀಯ. ಅಂದಿನ ಕಾಲಮಾನದಲ್ಲಿ ಪೌರೋಹಿತ್ಯವೆಂದರೆ ಬಡತನದ
ಉದ್ಯೋಗವಾಗಿತ್ತು. ಅದೊಂದು ವೃತ್ತಿಯಾಗಿದ್ದರೂ, ಜೀವನಾವಶ್ಯಕವನ್ನು ಪೂರೈಸಿಕೊಳ್ಳುವುದು ಕಷ್ಟವೆಂಬ ಪರಿಸ್ಥಿತಿ ಇತ್ತು. ಪುರದೆಲ್ಲರ ಹಿತ ಬಯಸುವ, ಉತ್ತರೋತ್ತರ ಶ್ರೇಯಕ್ಕಾಗಿ ಹಾರೈಸುವ ಪುರೋಹಿತರು ಕಷ್ಟದಲ್ಲಿದ್ದರೂ, ಶಿಷ್ಯಬಂಧುಗಳ ಔದಾರ್ಯತೆಯ ರಕ್ಷಣೆ ಇತ್ತು. ಅಂತಹ ದಿನಗಳಲ್ಲಿ ಪೌರೋಹಿತ್ಯವೂ ಒಂದು ಉದ್ಯೋಗ ಎಂಬ ನೆಲೆಯಲ್ಲಿ ವೃತ್ತಿ ಗೌರವ ಮತ್ತು ಪಾವಿತ್ರ್ಯತೆಯ ನೆಲೆಗಟ್ಟಿನಲ್ಲಿ, ಪೌರೋಹಿತ್ಯ ವೃತ್ತಿಗೊಂದು ಸ್ಥಾನ-ಮಾನ ಮತ್ತು ಆರ್ಥಿಕ ಬಲವನ್ನು ತಂದುಕೊಟ್ಟವರು ಇವರು. ಈ ಹಿನ್ನೆಲೆಯಲ್ಲಿ ಇವರ
ನೇರ ನಿಷ್ಠುರ ನಡೆ ಕೆಲವೊಮ್ಮೆ ಅಪಥ್ಯವಾಗಿದ್ದರೂ, ಪುರೋಹಿತ ವರ್ಗದವರ ಜೀವನ ಮಟ್ಟದ ಸುಧಾರಣೆಯ
ಕ್ರಾಂತಿಕಾರಿ ಹೆಜ್ಜೆಯಾಗಿತ್ತು ಎಂಬುದು ಒಪ್ಪಿಕೊಳ್ಳುವ ವಿಷಯವಾಗಿದೆ.

ಇವರ ಪತ್ನಿ ಸರೋಜಿನಿ. ಮನೆ, ಕೃಷಿ ಮಕ್ಕಳ ಜವಾಬ್ದಾರಿ ಇತ್ಯಾದಿಗಳ ನಿರ್ವಹಣೆಯನ್ನು ಮಾಡಿದ ಆದರ್ಶ ಗೃಹಣಿ. ಇವರಿಗೆ ನಾಲ್ಕು ಜನ ಮಕ್ಕಳು. ಮಗಳು ಗೀತಾ ದೇವಿ, ವಿವಾಹಿತರಾಗಿ ಮಂಗಳೂರಿನಲ್ಲಿದ್ದಾರೆ. ಹಿರಿಯ ಮಗ ತಂದೆಯAತೆ ವೇದ ವಿದ್ವಾಂಸರಾಗಿ, ತಂದೆಯ ವೃತ್ತಿಯಾದ ಪೌರೋಹಿತ್ಯವನ್ನು ಮುನ್ನಡೆಸುತ್ತಿದ್ದಾರೆ. ಜೊತೆಗೆ ಸಮಾಜಿಕವಾಗಿಯೂ ತೊಡಗಿಸಿಕೊಂಡಿದ್ದಾರೆ. ಎರಡನೆಯ ಮಗ ಡಾ.ಮುರಲೀ ಮೋಹನ್ ಚೂಂತಾರು. ಬಾಯಿ, ಮುಖ ಮತ್ತು ದವಡೆ ಶಸ್ತçಚಿಕಿತ್ಸಕರಾಗಿದ್ದು, ಹೊಸಂಗಡಿಯಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯವನ್ನು ನಡೆಸುತ್ತಿದ್ದಾರೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಆಗಿ, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ವೈದ್ಯಕೀಯ ಸಾಹಿತ್ಯದ ಪ್ರಸಿದ್ಧ ಬರಹಗಾರರಾಗಿ ಸಮಾಜಮುಖಿಯಾಗಿ ತೊಡಗಿಕೊಂಡಿದ್ದಾರೆ. ಕೊನೆಯ ಮಗ
ನಾಕೇಶ ಇಂಜಿನಿಯರಿಂಗ್ ಪದವೀಧರರಾಗಿದ್ದು ಸದ್ಯ ಅಮೇರಿಕಾದಲ್ಲಿ ವೃತ್ತಿ ನಿರತರಾಗಿರುತ್ತಾರೆ. ಮಕ್ಕಳೆಲ್ಲರು ಸೇರಿ ತಾಯಿಯ ನೆನಪಿನಲ್ಲಿ ಚೂಂತಾರು ಸರೋಜಿನಿ ಪ್ರತಿಷ್ಠಾನವೆಂಬ ಸಂಸ್ಥೆಯನ್ನು ನಡೆಸುತ್ತಿದ್ದು, ಲಕ್ಷ್ಮೀ ನಾರಾಯಣ ಭಟ್ಟರು ಗೌರವ ಅಧ್ಯಕ್ಷರಾಗಿ ಅದರ ಮಾರ್ಗದರ್ಶಕರೂ ಆಗಿದ್ದರು. ಈವರು 80ನೇ
ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಮಕ್ಕಳು “ಅಶೀತಿ” ಎಂಬ ಸ್ಮರಣ ಸಂಚಿಕೆಯನ್ನು ಸಮರ್ಪಿಸಿರುವುದು ಲಕ್ಷ್ಮೀ ನಾರಾಯಣ ಭಟ್ಟರ ಹೆಸರನ್ನು ಶಾಶ್ವತವಾಗಿರಿಸಿದ ಕಾರ್ಯವಾಗಿದೆ. ಸಮಾಜದ ಸಂಸ್ಕೃತಿಯನ್ನು ಅಲ್ಲಿನ ಜನ ವಾಸಿಗಳ ಸಂಸ್ಕಾರದಲ್ಲಿ ಕಾಣಬೇಕಂತೆ. ಒಂದು ಕುಟುಂಬದ ಸಂಸ್ಕೃತಿಯನ್ನು ಅದರ
ಸದಸ್ಯರಲ್ಲಿ ಕಾಣಬಹುದಂತೆ. ಅಂತೆಯೇ ತಂದೆ-ತಾಯಿಯವರ ಸಂಸ್ಕಾರ- ಸಂಸ್ಕೃತಿಯನ್ನು ಮಕ್ಕಳಲ್ಲಿ ಕಾಣಬೇಕಂತೆ. ಈ ಮಾತಿನಂತೆ ಚೂಂತಾರು ಲಕ್ಷ್ಮೀ ನಾರಾಯಣ ಭಟ್ಟರು ಮತ್ತು ಅವರ ಕುಟುಂಬ ಬೆಳೆದಿದೆ, ವಿಸ್ತಾರಗೊಂಡಿದೆ. 1941ರಲ್ಲಿ ಮಾರ್ಚ್ 1 ರಂದು ಜನಿಸಿದ ಇವರು, 14-10-2022ನೇ
ಶುಕ್ರವಾರದಂದು 82 ವರ್ಷಗಳ ತುಂಬು ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ಬದುಕಿನ ಮೌಲ್ಯಗಳು, ಸಾಮಾಜಿಕ ಕೊಡುಗೆಗಳು ಪ್ರಚಾರ ಪಡೆಯದಿದ್ದರೂ, ಶಾಶ್ವತ ಸ್ಮಾರಕಗಳ ರೂಪದಲ್ಲಿ ಕಾಣಿಸಿಗದಿದ್ದರೂ, ಜನಜೀವನದಲ್ಲಿ ಸದಾ ಜೀವಂತವಾಗಿರುವುದು ಸಣ್ಣ ಸಂಗತಿಯಲ್ಲ. ಜೀವಂತಿಕೆಯ ಬದುಕಿಗೆ ಜೀವದ್ರವ್ಯದಂತೆ, ಹವಿಸ್ಸಿನಂತೆ ಬದುಕಿದ ಲಕ್ಷ್ಮೀ ನಾರಾಯಣ ಭಟ್ಟರು ಎಂದೂ ಮರೆಯಾಗದ ಮರೆಯಬಾರದ ವ್ಯಕ್ತಿತ್ವ
ವಿಶೇಷದವರು.

“ಯಾರು ವಿಹಿತವಾದ ಕರ್ಮವನ್ನು ಮಾಡುವನೋ ಅವನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.” ಎಂಬ ಭಗವದ್ಗೀತೆಯ ಮಾತಿನಂತೆ ನಡೆದು, ಸದಾಕಾಲ ಶಿಷ್ಯವರ್ಗದ ಮತ್ತು ಸಮಾಜದ ಹಿತಕ್ಕಾಗಿ, ಪುರದ ಒಳಿತಿಗಾಗಿ ತಮ್ಮ ವೈಯಕ್ತಿಕ ಜೀವನವನ್ನು ಶ್ರೀ ಲಕ್ಷ್ಮೀ ನಾರಾಯಣ ಭಟ್ಟರು ಶ್ರೀಗಂಧದ ಕೊರಡಿನಂತೆ ಸವೆಸಿದರು. ಸೇವಾ ಸಮಯದಲ್ಲಿ ಬದ್ಧತೆ, ಪಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಸಮಾಜದ ಎಲ್ಲಾ ವರ್ಗದ ಜನರ ಪ್ರೀತಿಗೆ ಭಾಜನರಾದ ಶ್ರೀಯುತರು, ಧಾರ್ಮಿಕ ಕರ‍್ಯಗಳಲ್ಲಿ ತಮ್ಮನ್ನು ತ್ರಿಕರಣ ಪೂರ್ವಕವಾಗಿ ಸೇವೆ ಸಲ್ಲಿಸಿ ಎಲ್ಲರಿಗೂ ಆದರ್ಶಪ್ರಿಯರಾಗಿ ಬಾಳಿ ಬದುಕಿ ಸಾರ್ಥಕ್ಯವನ್ನು ಕಂಡುಕೊಂಡರು. ಸರಳ, ಶಿಸ್ತು ಬದ್ಧ,
ನೇರ ನಡೆ-ನುಡಿಯ ವ್ಯಕ್ತಿತ್ವದ ಆದರ್ಶ ಬದುಕು ನಡೆಸಿದ ಚೂಂತಾರು ಲಕ್ಷ್ಮೀ ನಾರಾಯಣ ಭಟ್ಟರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿ ಸದ್ಗತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತಾ, ಅಗಲಿದ ಹಿರಿಯ ಚೇತನಕ್ಕೆ ಅಕ್ಷರ ರೂಪದ ಎರಡು ನುಡಿನಮನಗಳನ್ನು ಈ ಮೂಲಕ ಅರ್ಪಿಸುತ್ತೇವೆ.

 

More from the blog

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ

ಗುಡ್ಡೆ ಅಂಗಡಿ ನೂರೂದ್ದೀನ್ ಮಸೀದಿಯಲ್ಲಿ ಈದ್ ಮುಬಾರಕ್ ಆಚರಣೆ ನಡೆಯಿತು. ಖತೀಬರಾದ ಅಸ್ವೀಫ್ ಧಾರಿಮಿ ಅವರು ನೇತೃತ್ವ ವಹಿಸಿ ಈದ್ ಸಂದೇಶವನ್ನು ಸಾರಿದರು.. ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್, ಎನ್‌.ಜೆ.ಎಮ್ ಮಸೀದಿ  ಇದರ ಅಧ್ಯಕ್ಷ...

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ದ.ಕ. ಉಡುಪಿ ಜಿಲ್ಲೆಗೆ ಇಂದು ರಜೆ ಘೋಷಣೆ : ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆ

ಮಂಗಳೂರು: ಈದ್ ಉಲ್-ಫಿತರ್ ಪ್ರಯುಕ್ತ ಏಪ್ರಿಲ್ 10ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರದ...