ಕೊಡಗು: ಅನೆಕಾಡು ಅರಣ್ಯ ಇಲಾಖೆಯ ಸೌದೆ ಡಿಪೋ ಬಳಿಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕುರಿತು ಖಚಿತ ಮಾಹಿತಿ ಮೆರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಕುಶಾಲನಗರ ಪಟ್ಟಣ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರು ಗಾಂಜಾ ಸೇವನೆ ಮಾಡುತ್ತಿರುವ ಕುರಿತು ದೂರುಗಳ ಬಂದ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅನೆಕಾಡು ಅರಣ್ಯ ಇಲಾಖೆಯ ಸೌದೆ ಡಿಪೋ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಮೆರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಆಟೋ ಚಾಲಕ ಮುಜಾಹಿದ್ ಪಾಷ, ಮಹಮ್ಮದ್ ರಫೀಕ್ ನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ಬಂಧಿತರಿಂದ 65,000 ರೂ.ಬೆಲೆ ಬಾಳುವ 2 ಕೆ.ಜಿ 125 ಗ್ರಾಂ ಒಣಗಿದ ಗಾಂಜಾ, 2 ಮೊಬೈಲ್ ಫೋನ್‌ಗಳು, ಒಂದು ಮಾರುತಿ ಕಾರು, ಒಂದು ಆಟೋ ರಿಕ್ಷಾವನ್ನು ವಶ ಪಡಿಸಿಕೊಂಡಿದ್ದಾರೆ.
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ಅಯ್ಯಪ್ಪ ರವರ ನಿರ್ದೇಶನದಂತೆ, ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ.ಗಂಗಾಧರಪ್ಪ ಮಾರ್ಗದರ್ಶನಲ್ಲಿ, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ.ಬಿ.ಜಿ ನೇತೃತ್ವದಲ್ಲಿ, ಕುಶಾಲನಗರ ಗ್ರಾಮಾಂತರ ಠಾಣಾ ಪಿ.ಎಸ್.ಐ ಚಂದ್ರಶೇಖರ್.ಹೆಚ್.ವಿ, ಪಿ.ಎಸ್.ಐ ಭಾರತೀ, ಪ್ರೋ.ಪಿ.ಎಸ್.ಐ ಕಾಶಿನಾಥ್, ಎ.ಎಸ್.ಐ ಎನ್.ಕುಮಾರಿ, ಬಿ.ಎಸ್.ವಿಠಲ ಹಾಗೂ ಸಿಬ್ಬಂದಿಯವರಾದ ಲೋಕೇಶ್. ಶಿವಕುಮಾರ್, ಮಂಜುನಾಥ್, ಅಜಿತ್, ಸಜಿ, ಪ್ರಕಾಶ್, ಸಂದೇಶ್, ರಮೇಶ್, ದಿನೇಶ್, ಕಾಂತಿ, ಹರ್ಷಾವತಿ, ಸುಂಟಿಕೊಪ್ಪ ಠಾಣೆಯ ಉದಯ, ಪ್ರವೀಣ್ ಮತ್ತು ಸಿಡಿಆರ್ ಘಟಕದ ಸಿಬ್ಬಂದಿ ರಾಜೇಸ್, ಗಿರೀಶ್, ಪ್ರವೀಣ್ ರವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಈ ಪ್ರಕರಣವನ್ನು ಪತ್ತೆ ಹಚ್ಚಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಪೊಲೀಸ್ ಅದೀಕ್ಷಕರು ನಗದು ಬಹುಮಾನವನ್ನು ಘೋಷಿಸಿದ್ದಾರೆ.