ಕರುನಾಡ ರತ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಸಾಕ್ಷ್ಯಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಕರ್ನಾಟಕದ ಕಾಡು ಉಳಿಸಿ ಎಂಬ ಡಾ. ರಾಜ್ ಸಂದೇಶದ ಮರುಜನ್ಮವೇ ಹೊಸ ಗಂಧದ ಗುಡಿ ಸಾರಾಂಶ. ವಿಶೇಷ ಎಂದರೆ ಇಲ್ಲಿ ಪುನೀತ್ ರಾಜ್ಕುಮಾರ್ ಅವರು ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಾಕ್ಷ್ಯ ಚಿತ್ರವನ್ನು ನಿರ್ದೇಶಿಸಿರುವುದು ವೈಲ್ಡ್ ಕರ್ನಾಟಕ ಖ್ಯಾತಿಯ ನಿರ್ದೇಶಕ ಅಮೋಘವರ್ಷ. ವಿಶೇಷ ಎಂದರೆ ಇದಕ್ಕೆ ಗಂಧದ ಗುಡಿ ಎಂಬ ಹೆಸರಿದ್ದರೂ, ಕೇವಲ ಕಾಡುಗಳನ್ನು ಮಾತ್ರ ತೋರಿಸಲಾಗಿಲ್ಲ. ನದಿ, ಬೆಟ್ಟ ಗುಡ್ಡಗಳು ಸೇರಿದಂತೆ ಇನ್ನೂ ಹಲವು ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ. ಹಾಗೆಯೇ ಹೊಸ ಗಂಧದ ಗುಡಿಯ ಮತ್ತೊಂದು ವಿಶೇಷ ಎಂದರೆ ಟ್ರೈಲರ್ ನೋಡುತ್ತಿದ್ದಂತೆ ನೀವು ಕೂಡ ಅದೇ ಜಾಗದಲ್ಲಿ ಪ್ರಯಾಣಿಸುತ್ತಿರುವ ಅನುಭವ ನೀಡುತ್ತದೆ. ಅಂತಹ ಅತ್ಯಾದ್ಭುತ ಛಾಯಾಗ್ರಹಣವನ್ನು ನೀವು ಕಾಣಬಹುದು. ಒಟ್ಟಿನಲ್ಲಿ ಈ ಹಿಂದೆ ಇದ್ದ ನಿರೀಕ್ಷೆಯನ್ನು ಇಮ್ಮಡಿಗೊಳಿಸುವಂತೆ ಗಂಧದ ಗುಡಿ ಟ್ರೈಲರ್ ಬಿಡುಗಡೆಯಾಗಿದೆ.
2021ರ ಅಕ್ಟೋಬರ್ 29ರಂದು ಅಪ್ಪು ನಿಧನ ಹೊಂದಿದರು. ಇದೇ ಕಾರಣಕ್ಕೆ ಈ ವರ್ಷ ಅಕ್ಟೋಬರ್ 28ರಂದು ಗಂಧದ ಗುಡಿಯನ್ನು ರಿಲೀಸ್ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಡಾಕ್ಯುಮೆಂಟರಿಗಳು ಒಟಿಟಿ ಹಾಗೂ ಯೂಟ್ಯೂಬ್ಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ, ಗಂಧದ ಗುಡಿಯನ್ನು ಪುನೀತ್ ಅವರ ಆಸೆಯಂತೆ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳಿಂದ ಉತ್ತಮ ಬೆಂಬಲ ಸಿಗುವ ನಿರೀಕ್ಷೆ ಇದೆ.