ಕಾಸರಗೋಡು: ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಕ್ಷೇತ್ರ ಪಾಲಕನಂತಿದ್ದ ಮೊಸಳೆ ಬಬಿಯಾ ಸಾವನ್ನಪ್ಪಿದೆ.

ಸರೋವರ ಕ್ಷೇತ್ರ ಎಂದೇ ಖ್ಯಾತಿಯಾದ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಈ ಮೊಸಳೆಯು ಕ್ಷೇತ್ರ ಪಾಲಕನಂತಿತ್ತು. ಇದನ್ನು ದೇವರ ಮೊಸಳೆ ಎಂದೇ ಕರೆಯಲಾಗುತ್ತಿತ್ತು. ದಿನನಿತ್ಯ ದೇವರ ಪೂಜೆ ಬಳಿಕ ಬಬಿಯಾ ಮೊಸಳೆಗೆ ನೈವೇದ್ಯ ಅರ್ಪಿಸುವುದು ಇಲ್ಲಿ ಸಂಪ್ರದಾಯ. ಕೆಲವು ವರ್ಷಗಳ ಹಿಂದೆ ಈ ಮೊಸಳೆ ಕೆರೆಯಿಂದ ಹೊರ ಬಂದು ದೇವಸ್ಥಾನದ ಬಳಿ ಕಾಣಿಸಿಕೊಂಡು ನೆರೆದವರನ್ನು ಆಶ್ಚರ್ಯಗೊಳಿಸಿತ್ತು.
ಭಕ್ತರು ಕೆರೆಗೆ ಇಳಿದು ಶುಚಿರ್ಭೂತರಾಗಿ ಬರುತ್ತಿದ್ದರು. ಆದರೆ ಯಾರಿಗೂ ಯಾವುದೇ ರೀತಿಯ ತೊಂದರೆ ಉಂಟು ಮಾಡುತ್ತಿರಲಿಲ್ಲ. ದೇವಳದ ಕೆರೆಯಲ್ಲಿ ಸುದೀರ್ಘ ಅವಧಿಗೆ ವಾಸವಾಗಿದ್ದ ಬಬಿಯಾ ಇದೀಗ ಇಹಲೋಕ ತ್ಯಜಿಸಿದೆ.