ಮೈಸೂರು: ಐತಿಹಾಸಿಕ ಜಂಬೂ ಸವಾರಿಗೆ ಮೈಸೂರು ಸಜ್ಜಾಗಿದೆ. ಇಂದು ಮಧ್ಯಾಹ್ನ 2.36 ರಿಂದ 2.50ರ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಲಿದ್ದು ಜಂಬೂ ಸವಾರಿ ಮರೆವಣಿಗೆಗೆ ಚಾಲನೆ ನೀಡಲಿದ್ದಾರೆ.

ಸಂಜೆ 5.07ರಿಂದ 5.18ರವರೆಗೆ ಮಕರ ಲಗ್ನ ಮುಹೂರ್ತದಲ್ಲಿ 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡಿ ದೇವಿಯನ್ನ ಹೊತ್ತು ಆನೆ ಅಭಿಮನ್ಯು ಸಾಗಲಿದ್ದು, ಬಳಿಕ ಅಂಬಾರಿಯಲ್ಲಿರುವ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ವೇಳೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಎಸ್ ಟಿ ಸೋಮಶೇಖರ್, ಮೇಯರ್ ಶಿವಕುಮಾರ್ ಸೇರಿ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಡಾ ಚಂದ್ರಗುಪ್ತ ಭಾಗಿಯಾಗಲಿದ್ದಾರೆ.
ಇನ್ನು ಮತ್ತೊಂದು ಕಡೆ ವಿಶ್ವವಿಖ್ಯಾತ ಜಂಬೂಸವಾರಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿವಿಧ ಜಿಲ್ಲೆಗಳಿಂದ ಗರುಡ ಪಡೆ, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಮೈಸೂರಿಗೆ ಆಗಮಿಸಿದ್ದು, ಜಂಬೂಸವಾರಿ ಸಾಗುವ ಮಾರ್ಗದುದ್ದಕ್ಕೂ ಪರಿಶೀಲನೆ ನಡೆಸಲಾಗಿದೆ.