ದಕ್ಷಿಣ ಕನ್ನಡ ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಪತ್ರ ಕರ್ತರ ಸಂಘ ಮತ್ತು ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆ ಗಾಗಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ ಮತ್ತು ಸ್ವಚ್ಛತಾ ಕಾರ್ಯಕ್ರಮ ಅಕ್ಟೋಬರ್1 (ದಿನಾಂಕ:-01-10-2022) ರಂದು ಬೆಳಗ್ಗೆ 10 ಗಂಟೆಗೆ ಪೂಂಜಾಲಕಟ್ಟೆ ಸುವಿಧ ಸಹಕಾರಿ ಭವನದಲ್ಲಿ ನಡೆಯಲಿದೆ.
ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಸುಡುವುದರಿಂದ ಹೊರ ಬರುವ ವಾಯು ಮಾಲಿನ್ಯ, ಇದರಿಂದ ಉಂಟಾಗುವ ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ದೂರವಿರಲು ಪ್ಲಾಸ್ಟಿಕ್ ಬಳಕೆಯನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಮತ್ತು ಪರಿಸರ ಮಾಲಿನ್ಯ ತಡೆಯಲು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ಲಾಸ್ಟಿಕ್ ತ್ಯಾಜ್ಯ ತಂದು ಅಕ್ಕಿ ಪಡೆಯಿರಿ….!: ಜಾಗೃತಿ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಗೆ ವಿಶೇಷ ಕೊಡುಗೆ ಇದ್ದು, ಅರ್ಧ ಕಿಲೊ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತರುವವರಿಗೆ 5 ಕಿಲೊ ಕುಚ್ಚಲು ಅಕ್ಕಿ, ಮತ್ತು 1 ಕಿಲೊ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ತರುವವರಿಗೆ 10 ಕಿಲೊ ಕುಚ್ಚಲು ಅಕ್ಕಿ ನೀಡಲಾಗುವುದು.
ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಉದ್ಘಾಟಿಸುವರು. ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ ಅಧ್ಯಕ್ಷತೆ ವಹಿಸುವರು. ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಮೇಶ್ ಕೆ.ಎಸ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ದ.ಕ.ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪೂಂಜಾಲಕಟ್ಟೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮೀನಾರಾಯಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಮಪ್ಪ ಕೊರವ ಭಾಗವಹಿಸುವರು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.