ವಿಟ್ಲ: ಭಕ್ತಿ ಶ್ರದ್ದೆಯಿಂದ ಮಾಡಿದ ಕಾರ್ಯದಲ್ಲಿ ಫಲ ಹೆಚ್ಚು. ಇತರರ ಮನಸ್ಸಿಗೆ ನೋವುಂಟು ಮಾಡದೆ ಎಲ್ಲರನ್ನೂ ಪ್ರೀತಿಸುವ ಮನಸ್ಸು ನಮ್ಮದಾಗಬೇಕು. ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆಯಿಂದ ನಿಮ್ಮೆಲ್ಲರ ಕಷ್ಟಗಳೆಲ್ಲೂ ದೂರವಾಗಲಿ. ನವದುರ್ಗೆಯರು ಎಲ್ಲರಿಗೂ ಒಳಿತು ಮಾಡಲಿ ಎಂದು ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಕ್ಷೇತ್ರದಲ್ಲಿ ಸೆ.೨೬ರಿಂದ ಅ.೬ರ ವರೆಗೆ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಿ, ಕೊಪ್ಪರಿಗೆ ಮುಹೂರ್ತ ನಡೆಸಿ ಆಶೀರ್ವಚನ ನೀಡಿದರು.
ಸೆ.೨೬ರಂದು ಬೆಳಗ್ಗೆ ಗಣಪತಿಹೋಮ ನಡೆದು ಕೊಪ್ಪರಿಗೆ ಮುಹೂರ್ತ ನಡೆಯಿತು. ದೇವತಾ ಕಾರ್ಯಕ್ರಮಗಳು ಬಳಿಕ ಚಂಡಿಕಾಯಾಗ, ಭಜನಾ ಸಂಕೀರ್ತನೆ, ಸಾಮೂಹಿಕ ಕುಂಕುಮಾರ್ಚನೆ ನಡೆದು ಮಹಾಪೂಜೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಟ್ರಸ್ಟಿ ತಾರನಾಥ ಕೊಟ್ಟಾರಿ, ಮಂಜು ವಿಟ್ಲ, ರಮೇಶ್ ಪನೊಳಿಬೈಲು, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.