ಬಂಟ್ವಾಳ: ಮನೆಯಲ್ಲಿ ಕಟ್ಟಿ ಹಾಕಿದ ನಾಯಿಯ ಮೇಲೆ ದಾಳಿ ನಡೆಸಿ, ಬಿಡಿಸಲು ಬಂದ ಮತ್ತೊಂದು ನಾಯಿಯನ್ನು ಚಿರತೆಯೊಂದು ಎಳೆದುಕೊಂಡು ಹೋಗಿ ತಿಂದು ಹಾಕಿದ ಘಟನೆ ವೀರಕಂಭ ಗ್ರಾಮದ ಕಲ್ಮಲೆಯಲ್ಲಿ ನಡೆದಿದೆ.
ಕಲ್ಮಲೆ ನಿವಾಸಿ ನಾರಾಯಣ ರೈ ಅವರ ಮನೆಯಂಗಳದಲ್ಲಿ ಕಟ್ಟಿ ಹಾಕಿದ ನಾಯಿಯ ಮೇಲೆ ದಾಳಿ ನಡೆಸುವಾಗ ಕಟ್ಟಿ ಹಾಕದೇ ಬಿಟ್ಟಿದ್ದ ನಾಯಿ ಬಿಡಿಸಲು ಬಂದಿದೆ. ಈ ವೇಳೆ ಚಿರತೆಯು ಕಟ್ಟಿ ಹಾಕಿದ ನಾಯಿಯನ್ನು ಬಿಟ್ಟು ಮತ್ತೊಂದನ್ನು ಎಳೆದುಕೊಂಡು ಹೋಗಿದೆ. ಮನೆಯವರು ನಾಯಿ ಬೊಬ್ಬೆ ಕೇಳಿ ಎದ್ದು ನೋಡುವಾಗ ಒಂದು ನಾಯಿ ಗಾಯಗೊಂಡು ಬೊಬ್ಬೆ ಹಾಕುತ್ತಿತ್ತು.
ಕಲ್ಮಲೆಯಿಂದ ಈ ಹಿಂದೆಯೇ ನಾಯಿಯನ್ನು ಚಿರತೆ ಕೊಂಡುಹೋಗಿದ್ದು, ಜತೆಗೆ ಹಗಲು ಹೊತ್ತಿನಲ್ಲಿ ನಾಯಿಗಳನ್ನು ಓಡಿಸಿಕೊಂಡು ಹೋಗುತ್ತಿರುವುದನ್ನು ಗ್ರಾಮಸ್ಥರು ಕಂಡಿದ್ದರು. ಕೆಲವು ದಿನಗಳ ಹಿಂದೆ ಕೋತಿಯೊಂದನ್ನು ಎಳೆದುಕೊಂಡು ಹೋಗಿರುವುದನ್ನು ರಬ್ಬರ್ ಟ್ಯಾಪಿಂಗ್ ಮಾಡುವ ಕಾರ್ಮಿಕರು ಕಂಡಿದ್ದರು. ಈ ಹಿಂದೆಯೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸೂಕ್ತ ರಕ್ಷಣೆಗೆ ಆಗ್ರಹಿಸಿದ್ದಾರೆ.