ಬಂಟ್ವಾಳ: ಜಗತ್ತಿನ ಹೈ ಸೆಕ್ಯುರಿಟಿಯ ನಾಯಕನಾಗಿ ಗುರುತಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಸೆ. 2ರಂದು ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಂಟ್ವಾಳದ ಹಿರಿಯ ಬಿಜೆಪಿ ನಾಯಕರೊಬ್ಬರಿಗೆ ಈ ಅವಕಾಶ ಲಭಿಸಿದ್ದು, ಪಕ್ಷದ ಹಿರಿಯ ಕಟ್ಟಾಳುವಿನ ನೆಲೆಯಲ್ಲಿ ಈ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಸಾಮಾನ್ಯರಿಗೆ ಯಾರಿಗೂ ಕೂಡಾ ಪ್ರಧಾನಿ ಮೋದಿ ಅವರ ಬಳಿ ತೆರಳುವುದಕ್ಕೆ ಅವಕಾಶವಿಲ್ಲ. ನಿಗದಿತ ವ್ಯಕ್ತಿಗಳು ಮಾತ್ರ ಈ ಅವಕಾಶವನ್ನು ಪಡೆದುಕೊಂಡು ತಮ್ಮ ಅಗ್ರಗಣ್ಯ ನಾಯಕನನ್ನು ಸಮೀಪದಿಂದ ಕಂಡು ಗೌರವಿಸುತ್ತಾರೆ.
ಈ ಬಾರಿ ಬಂಟ್ವಾಳ ಬಿಜೆಪಿಯ ಹಿರಿಯ ಮುಂದಾಳು, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಿಗಳಿಗೆ ನಮಸ್ಕರಿಸಿ ಸ್ವಾಗತಿಸಿದ್ದು, ಅಂತಹ ಗೌರವ ಸಿಕ್ಕಿರುವುದೇ ಅವಿಸ್ಮರಣೀಯ ಕ್ಷಣ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಅವರನ್ನು ಸ್ವಾಗತಿಸುವ ಅವಕಾಶ ಸಿಕ್ಕಿತ್ತು. ಇದೀಗ ಜಗತ್ತಿನ ಶ್ರೇಷ್ಠ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮಸ್ಕರಿಸಿ ಸ್ವಾಗತಿಸಿದ್ದೇವೆ. ಅವರು ಹತ್ತಿರ ಬರುತ್ತಿದ್ದಂತೆ ಕೈಸೆ ಹೋ ಎಂದು ಎಲ್ಲರ ಯೋಗಕ್ಷೇಮ ವಿಚಾರಿಸಿದ್ದು, ಇಂತಹ ಅವಕಾಶ ನೀಡಿರುವ ಪಕ್ಷಕ್ಕೆ ಚಿರ ಋಣಿಯಾಗಿದ್ದೇನೆ ಎಂದು ತುಂಗಪ್ಪ ಬಂಗೇರ ಅವರ ಸಂತಸ ವ್ಯಕ್ತಪಡಿಸಿದ್ದಾರೆ.