Tuesday, April 16, 2024

ಮಾಣಿಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ : ನಿಧಿ ಸಂಚಯನಕ್ಕೆ ಚಾಲನೆ

ವಿಟ್ಲ: ಇಚ್ಛಾ ಶಕ್ತಿ, ಕ್ರಿಯಾ ಶಕ್ತಿ, ಜ್ಞಾನ ಶಕ್ತಿ ನಮ್ಮೊಳಗಿದ್ದಾಗ ಯಾವುದೇ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.ಒಳ್ಳೆಯ ಕಾರ್ಯದಲ್ಲಿ ವಿಘ್ನ, ತಡೆಗಳು ಎಂದು ಅದನ್ನು ನಿವಾರಿಸಿ ಮುನ್ನಡೆಯುವ ಮನಸ್ಸು ನಮ್ಮಲ್ಲಿರಬೇಕು ಸಹಜ ಎಂದು ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ನುಡಿದರು.

ಅವರು ಶನಿವಾರ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ನಿಧಿಸಂಚಯನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಇಚ್ಚಾಶಕ್ತಿಯಿಂದ ಮಾಡಿದ ದಾನಕ್ಕೆ ಹೆಚ್ಚು ಮಹತ್ವವಿದೆ. ಸೇವೆಗೆ ಅನುಗ್ರಹ ನಿಶ್ಚಿತವಾಗಿದೆ. ಗುರುವಿಲ್ಲದಿದ್ದರೆ ಗುರಿ ಸಾಧಿಸಲಾಗದು. ಗುರುವಿನ ಆದರ್ಶದಂತೆ ಕ್ಷೇತ್ರದ ಧರ್ಮದರ್ಶಿಗಳು ನಡೆದುಕೊಂಡು ಬರುತ್ತಿದ್ದಾರೆ. ಧರ್ಮಕಾರ್ಯದ ಮೂಲಕ ಸಮಾಜದಿಂದ ಮನ್ನಣೆ ಪಡೆಯಲು‌ ಸಾಧ್ಯ ಒಳ್ಳೆಯ ಮನಸ್ಸಿದ್ದವರು ಸಿರಿವಂತಮಾಗಲು ಸಾಧ್ಯ. ಹಿರಿಯರ ಸಾಧನೆಯ ಫಲವಾಗಿ ಕ್ಷೇತ್ರ ಇಷ್ಟೊಂದು ಬೆಳಗಲು ಸಾಧ್ಯವಾಗಿದೆ. ಬಡ ಬಗ್ಗರ ನಿಸ್ವಾರ್ಥ ಸೇವೆ ಕ್ಷೇತ್ರಕ್ಕೆ ಅಪಾರವಿದೆ. ನೀವೆಲ್ಲರೂ ಒಟ್ಟಾಗಿ ಕೈಜೋಡಿಸಿದರೆ ಕ್ಷೇತ್ರದ ಜೀರ್ಣೋದ್ಧಾರ ಸುಸೂತ್ರವಾಗಿ ನಡೆಯಲು ಸಾಧ್ಯ ಎಂದು ಕ್ಷೇತ್ರದ‌ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿಯವರು ಹೇಳಿದರು.

ಮುಂದಿನ ದಿನಗಳಲ್ಲಿ ಉಪಸಮಿತಿಗಳನ್ನು ನಡೆಸಲಾಗುವುದು. ಆ ಮೂಲಕ ಎಲ್ಲರಿಗೂ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದಲ್ಲಿ ಭಾಗವಹಿಸಲು ಅನುಕೂಲಕರವಾಗಲಿದೆ. ಮೇಲು ಕೀಳೆಂಬ ಭಾವ ಕ್ಷೇತ್ರದಲ್ಲಿಲ್ಲ. ಕಷ್ಟದಲ್ಲಿರುವವರನ್ನು ಮೇಲಕ್ಕೆತ್ತುವ ಕಾರ್ಯ ಕ್ಷೇತ್ರದಿಂದ ನಿರಂತರವಾಗಿ ನಡೆಯುತ್ತಿದೆ.ಜಾತಿ ಧರ್ಮವನ್ನು ಬದಿಗಿಟ್ಟು ಒಂದೇ ತಾಯಿಯ ಮಕ್ಕಳಂತೆ ಎಲ್ಲರೂ ಕ್ಷೇತ್ರ ಬೆಳಗಲು ಸಹಕರಿಸಬೇಕೆಂದು ಹೇಳಿದರು.

ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲ್ ರವರು ಮಾತನಾಡಿ‌ ನನಗೂ ಕುಕ್ಕಾಜೆ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಊರಿನ ಕ್ಷೇತ್ರಗಳು ಅಭಿವೃದ್ದಿಯಾದರೆ ಇಡೀ ಊರು ಅಭಿವೃದ್ದಿಯಾದಂತೆ. ನಮ್ಮ ನಂಬಿಕೆ ನಮ್ಮನ್ನು ಉಳಿಸುತ್ತದೆ. ನಾವು ನಮ್ಮದೆನ್ನುವ ಭಾವನೆ ನಮ್ಮಲ್ಲಿ ಬಂದಾಗ ಯಾವುದೇ ಕೆಲಸಗಳು ಸಾಕಾರಗೊಳ್ಳಲು ಸಾಧ್ಯ. ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ಕೆ ವೈಯಕ್ತಿಕ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ವಕೀಲರಾದ ಪದ್ಮನಾಭ ಪೂಜಾರಿ ಸಣ್ಣಗುತ್ತುರವರು ಮಾತನಾಡಿ   ದೇವಿಯ ಸಂಕಲ್ಪ ಹಾಗೂ ಗುರು ಹಿರಿಯರ‌ ಇಚ್ಚಾಶಕ್ತಿಯೊಂದಿಗೆ ಕೈಜೋಡಿಸಿದಾಗ ಜೀರ್ಣೋದ್ಧಾರ ಕಾರ್ಯ ಯಶಸ್ಸಾಗಲು ಸಾಧ್ಯ‌ ಎಂದರು.

ಕ್ಷೇತ್ರದ ಮೊಕ್ತೇಸರರಾದ ಎಂ.ಕೆ. ಕುಕ್ಕಾಜೆರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಕ್ಷೇತ್ರದಲ್ಲಿ ಆದ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಕ್ಷೇತ್ರದ ಭಕ್ತರೇ ಕಾರಣ. ನಿರಂತರವಾಗಿ ಬಡ ಬಗ್ಗರ ಏಳಿಗೆಗಾಗಿ ಕ್ಷೇತ್ರದಿಂದ ಶ್ರಮಿಸಲಾಗುತ್ತಿದೆ. ಎಲ್ಲರೂ ಒಟ್ಟು ಸೇರಿ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ದಿಯಲ್ಲಿ ಪಾಲು ಪಡೆಯೋಣ ಎಂದರು.

ಬಾಳೆಕಲ್ಲು ಗರಡಿ ಮನೆಯ ಮೊಕ್ತೇಸರರಾದ ಕೊರಗಪ್ಪ ಪೂಜಾರಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕುಕ್ಕಾಜೆ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಕಾರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಮಾಣಿಲ ಮುರುವ ಪಂಜುರ್ಲಿ ದೈವಸ್ಥಾನದ ಶ್ರೀಕಾಂತ್ ಮಾಣಿಲತ್ತಾಯ, ಮಾಣಿಲ ಗ್ರಾ.ಪಂ. ಅಧ್ಯಕ್ಷರಾದ ವನಿತಾ ತಾರಿದಳ, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ಪೆರುವಾಯಿ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಂದ್ರ ರೈ ಪೆರುವಾಯಿ, ಜಗನ್ನಾಥ ರೈ ಕೆಳಗಿನ ಮನೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ಬಿ.ಸಿ.ಟ್ರಸ್ಟ್) ವಿಟ್ಲದ ಹರಿಶ್ಚಂದ್ರ ಬಳಂತಿಮೊಗರು, ವಿಶ್ವಹಿಂದೂ ಪರಿಷತ್ ಮಾಣಿಲ ಘಟಕದ ಸಂಚಾಲಕರಾದ ಉದಯ ಶೆಟ್ಟಿ, ಎಸ್. ನಾರಾಯಣ್, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ.ವಿ. ಕೊಪ್ಪಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಶ್ಮಿತಾ, ಸುಕನ್ಯ ಪ್ರಾರ್ಥಿಸಿದರು. ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಳೆಕಲ್ಲು ಸ್ವಾಗತಿಸಿದರು. ಕ್ಷೇತ್ರದ ರವಿ ಎಸ್.ಎಂ. ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.

More from the blog

ಏ.19 -28: ಇತಿಹಾಸ ಪ್ರಸಿದ್ಧ ಕಟ್ಟತ್ತಿಲ ಉರೂಸ್

ವಿಟ್ಲ: ಸಾಲೆತ್ತೂರು ಗ್ರಾಮದ ಕಟ್ಟತ್ತಿಲದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಇತಿಹಾಸ ಪ್ರಸಿದ್ಧ ಅಸ್ಸಯ್ಯಿದ್ ವಲಿಯುಲ್ಲಾಹಿ (ಖ.ಸಿ) ಅವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮ ಮತ್ತು ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ...

ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡ ಕ್ಷೇತ್ರದ ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ನೇಮಕ

ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಸಂಯೋಜಕರನ್ನಾಗಿ ಅಬ್ದುಲ್ ರೆಹಮಾನ್ ಪಡ್ಪು ಅವರನ್ನು ನೇಮಕ ಮಾಡಲಾಗಿದೆ.    

ವಿಟ್ಲ ಪೇಟೆಯಲ್ಲಿ ಕಾಂಗ್ರೆಸ್ ರೋಡ್ ಶೋ: ಸುಡುಬಿಸಿಲಿಗೂ ಜಗ್ಗದ ಉತ್ಸಾಹ

ವಿಟ್ಲ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಮಂಗಳವಾರ ವಿಟ್ಲ ಪೇಟೆಯಲ್ಲಿ ರೋಡ್ ಶೋ ನಡೆಸಿ, ಪ್ರಚಾರ ಕಾರ್ಯ ನಡೆಸಿದರು. ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ...

ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ದ.ಕ ಜಿಲ್ಲೆಯ 42 ಮಂದಿ ಜೆಡಿಎಸ್ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಂಡರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್...