ವಿಟ್ಲ: ಅವಿವಾಹಿತ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಂಟ್ವಾಳ ತಾಲೂಕು ಪುಣಚ ಗ್ರಾಮದ ಅಜೇರುಮಜಲು ನಿವಾಸಿ ಅಪ್ಪು ಪಾಟಾಳಿರವರ ಪುತ್ರ ಬಾಲಕೃಷ್ಣ(೩೯ ವ.) ರವರು ಕಾಣೆಯಾದವರು.
ಅವಿವಾಹಿತರಾಗಿರುವ ಬಾಲಕೃಷ್ಣ ರವರು ಗಾರೆ ಕೆಲಸ ಮಾಡಿಕೊಂಡಿದ್ದು, ಸ್ವಸಹಾಯ ಸಂಘದ ಸದಸ್ಯರಾಗಿದ್ದು, ಸಂಘದಿಂದ ಸುಮಾರು ಒಂದು ಲಕ್ಷ ರೂಪಾಯಿ ಹಣವನ್ನು ಸಾಲವಾಗಿ ಪಡೆದಿದ್ದು, ಸರಿಯಾಗಿ ಸಂಘಕ್ಕೆ ಮರುಪಾವತಿ ಮಾಡಿರಲಿಲ್ಲ. ಅಷ್ಟೇ ಅಲ್ಲದೇ ಸ್ಥಳೀಯವಾಗಿ ಕೆಲವರಿಂದ ಹಣವನ್ನು ಕೈ ಸಾಲವಾಗಿ ಪಡೆದು ಅದನ್ನು ಹಿಂತಿರುಗಿಸದೆ ಇದ್ದು, ಕೆಲವರು ಹಣ ಮರು ಪಾವತಿಸುವಂತೆ ಒತ್ತಡ ಏರುತ್ತಿದ್ದರು. ಆ.8 ರಂದು ಬಾಲಕೃಷ್ಣ ಕೆಲಸಕ್ಕೂ ತೆರಳದೆ ಸಂಜೆ ವೇಳೆ ಮನೆಯಿಂದ ಹೊರಗಡೆ ಹೋಗಿದ್ದ. ಹೊರಡುವಾಗ ಇನ್ನೂ ಮುಂದಕ್ಕೆ ಮನೆಗೆ ಬರುವುದಿಲ್ಲ ಎಂದು ಹೊರಟು ಹೋಗಿದ್ದು, ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮನೆಗೆ ಬಾರದೆ ನಾಪತ್ತೆಯಾಗಿರುವ ತನ್ನ ಮಗನನ್ನು ಹುಡುಕಿ ಕೊಡುವಂತೆ ಬಾಲಕೃಷ್ಣರವರ ತಂದೆ ಅಪ್ಪು ಪಾಟಾಳಿಯವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಭಾವಚಿತ್ರದಲ್ಲಿರುವ ವ್ಯಕ್ತಿಯನ್ನು ಯಾರಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.