ವಿಟ್ಲ: ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ರಜತ ಮಹೋತ್ಸವದ ಪ್ರಯುಕ್ತ ನಿರ್ಮಿಸಲಾದ ಮನೆಯ ಹಸ್ತಾಂತರ ಕಾರ್ಯಕ್ರಮ ಭಾನುವಾರ ಮಾಣಿಲ ಗ್ರಾಮದ ಕುಕ್ಕಾಜೆಯಲ್ಲಿ ಭಾನುವಾರ ನಡೆಯಿತು.
ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ನೂತನ ಮನೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಜಗತ್ತು ಎಂಬುದು ಭಗವಂತನ ಸಾಮ್ರಾಜ್ಯವಾಗಿದೆ. ಇಲ್ಲಿ ಎಲ್ಲರೂ ಸಮಾನರು. ಭಾವನೆ ಮತ್ತು ಮನಸು ಏಕತೆಯಲ್ಲಿಡಬೇಕು. ಎಲ್ಲರೊಂದಿಗೆ ಬೆರೆತು ಬಾಳಬೇಕು. ಭಾವನೆ ಇದ್ದಾಗ ಕಾರ್ಯ ಯಶಸ್ಸು ಆಗುತ್ತದೆ. ಮಾಣಿಲ ಮತ್ತು ಪೆರುವಾಯಿ ಸಾಮಾರಸ್ಯದ ಕ್ಷೇತ್ರವಾಗಿದೆ. ಇಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಧಾರ್ಮಿಕ ಕ್ಷೇತ್ರದ ಮೂಲಕ ಸಾಮಾರಸ್ಯ ಶಾಶ್ವತವಾಗಿ ಉಳಿಯಲಿದೆ ಎಂದರು. ಮುಂದಿನ ಮನೆ ನಿರ್ಮಾಣದ ಯೋಜನೆಗೆವ ಕ್ಷೇತ್ರದಿಂದ 25 ಸಾವಿರ ರೂ. ನೀಡುವುದಾಗಿ ಘೋಷಿಸಿದರು.
ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಮಾತನಾಡಿ ಈ ಮನೆ ಸಾಮಾರಸ್ಯದಿಂದ ನಿರ್ಮಾಣಗೊಂಡಿದೆ. ಎಲ್ಲರೂ ಸಹಭಾಳ್ವೆಯಿಂದ ಜೀವನ ನಡೆಸಿದಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಸ್ ಮಾತನಾಡಿದರು. ಲ್ಯಾನ್ಸಿ ಕ್ರಾಸ್ತಾ ಕುಕ್ಕಾಜೆ, ಸಂತ ಅಂತೋನಿ ವಾಳೆ ಅವರಿಗೆ ಮನೆ ಹಸ್ತಾಂತರ ಮಾಡಲಾಯಿತು. ಮನೆ ನಿರ್ಮಾಣಕ್ಕೆ ಸಹಕಾರ ನೀಡಿದ ಗಣ್ಯರನ್ನು ಗೌರವಿಸಲಾಯಿತು.
ವಿನ್ಸೆಂಟ್ ಡಿ ಸೋಜ, ವಿಲಿಯಂ ಡಿ ಸೋಜ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ಮೊಂತೆರೋ ಸ್ವಾಗತಿಸಿ, ನಿರೂಪಿಸಿದರು.