ಜಾತಿ, ಮತ, ಧರ್ಮ, ಭಾಷೆ, ಸಂಸ್ಕೃತಿ ಮುಂತಾದ ವಿಭಿನ್ನ ನೆಲೆಗಳಲ್ಲಿ ಗುರುತಿಸಿಕೊಂಡಿರುವ ಭಾರತ ಇಂದು ಇಡೀ ಜಗತ್ತಿಗೇ ತನ್ನ ಸಾಮರ್ಥ್ಯದ ಹರಹುಗಳನ್ನು ವಿಸ್ತರಿಸಿಕೊಳ್ಳುತ್ತಿರುವುದನ್ನು ಕಂಡಾಗ ಭವ್ಯ ಭಾರತದ ಕಲ್ಪನೆಗೆ ಇದು ಸಾಕ್ಷಿ ಎನ್ನುವಂತಿದೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ, ‘ನೂರು ಮತ ನಮಗಿರಲಿ ನೂರು ಮಾತಾಗಿರಲಿ ನಾಡಿನಾ ಜನಮನ ನಾವೆಲ್ಲ ಒಂದೆ ಭಾವೈಕ್ಯದಲಿ ಕೂಡಿ ನಡೆಯುವೆವು ಮುಂದೆ’ ಅನ್ನುವ ಪ್ರತಿಜ್ಞೆಯೊಂದಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಘಳಿಗೆಯನ್ನು ಅರ್ಥಪೂರ್ಣವಾಗಿಸಬೇಕಾಗಿದೆ ಎಂದು ನಿವೃತ್ತ ಉಪನ್ಯಾಸಕ ಪ್ರೊ| ರಾಜಮಣಿ ರಾಮಕುಂಜ ಅವರು ಅಭಿಪ್ರಾಯಪಟ್ಟರು.
ಬಿ.ಸಿ. ರೋಡಿನ ಕೈಕಂಬ ಸರಿದಂತರ ಪ್ರಕಾಶನದ ಆಶ್ರಯದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣ ಗೈದು ಶುಭ ಹಾರೈಸಿದ ಮಾಜಿ ಸೈನಿಕ ಶ್ರೀ ಹೆನ್ರಿ ಮಿನೇಜಸ್ ಅವರನ್ನು ಪ್ರಕಾಶನದ ವತಿಯಿಂದ ಗೌರವಿಸಲಾಯಿತು. ಮೇಧಾ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.