ಬಂಟ್ವಾಳ: ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆದ ಕಾಲ್ನಡಿಗೆ ಯಾತ್ರೆಯು ಬಿ.ಸಿ.ರೋಡಿನ ಕೈಕಂಬದಲ್ಲಿ ಸಮಾಪನಗೊಂಡಿತು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರನ್ನೇ ಅಪಮಾನ ಮಾಡುವ ಜನ ಹುಟ್ಟಿಕೊಂಡಿದ್ದು, ಅವರು ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ. ರಾಜ್ಯ ಸರಕಾರ ನೆಹರೂ ಅವರನ್ನೇ ಮರೆತು ಸ್ವಾತಂತ್ರ್ಯ ಹೋರಾಟಗಾರರ ಜಾಹೀರಾತು ಹಾಕುವವರೆಗೆ ಪರಿಸ್ಥಿತಿ ತಲುಪಿದೆ. ಮಂಗಳೂರಿನ ನೆಹರೂ ಮೈದಾನದ ಹೆಸರನ್ನೂ ಬೇರೆ ಹೆಸರಿನಿಂದ ಕರೆಯುತ್ತಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಕೊಪ್ಪ ಪ್ರಧಾನ ಭಾಷಣ ಮಾಡಿ, ಕಾಂಗ್ರೆಸ್ ಭಾರತದ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿದ್ದು, ಕಾಂಗ್ರೆಸ್ ತಾಯಿಯ ಸ್ಥಾನದಲ್ಲಿ ನಿಂತು ದೇಶವನ್ನು ಉಳಿಸಿದೆ. ನಿತ್ಯ ಸ್ವಾತಂತ್ರ್ಯ ಯಾತ್ರೆ ನಡೆಯಬೇಕು ಎಂಬ ಕಲ್ಪನೆಯಲ್ಲಿ ಪ್ರಸ್ತುತ ಕಾಲ್ನಡಿಗೆ ಜಾಥಾ ನಡೆದಿದೆ ಎಂದರು.
ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ, ಜಿ.ಪಂ.ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಈಶ್ವರ ಭಟ್ ಪಂಜಿಗುಡ್ಡೆ, ಜಿಲ್ಲಾ ಸೇವಾದಳದ ಜೋಕಿಂ, ಪ್ರಮುಖರಾದ ಪಿಯೂಸ್ ರೊಡ್ರಿಗಸ್, ದಿವ್ಯಪ್ರಭಾ ಚಿಲ್ತಡ್ಕ, ಮಹಮ್ಮದ್ ಶರೀಪ್, ಸುದರ್ಶನ್ ಜೈನ್, ಅಬ್ಬಾಸ್ ಆಲಿ ಮೊದಲಾದವರಿದ್ದರು.