ವಿಟ್ಲ: ಬಕ್ರೀದ್ ಹಬ್ಬದ ಪ್ರಯುಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೊಡಂಗೆ ಚೆಕ್ ಪೋಸ್ಟ್ ನಲ್ಲಿ ದಿನದ ೨೪ಗಂಟೆಯು ಸಿಬ್ಬಂದಿಗಳು ಇರಲಿದ್ದು, ವಾಹನ ತಪಾಸಣೆ ನಡೆಯಲಿದೆ ಎಂದು ಜಿಲ್ಲಾ ಎಸ್ಪಿ ಸೋನಾವಣೆ ಋಷಿಕೇಶ್ ಭಗವಾನ್ ರವರು ಹೇಳಿದರು.
ಅವರು ಜು.೩ರಂದು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಕೇರಳ ಕರ್ನಾಟಕ ಗಡಿಪ್ರದೇಶವಾದ ಕೊಡಂಗೆ ಎಂಬಲ್ಲಿನ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರಿಂದ ಮಾಹಿತಿ ಪಡೆದುಕೊಂಡರು. ಕೇರಳವನ್ನು ಸಂಪರ್ಕಿಸುವ ಪ್ರಧಾನ ರಸ್ತೆಗಳಲ್ಲೋಂದಾದ ಸಾಲೆತ್ತೂರು ಸಮೀಪದ ಕೊಡಂಗೆ ಚೆಕ್ ಪೋಸ್ಟ್ ಮೂಲಕ ಕರ್ನಾಟಕದಲ್ಲಿ ದುಷ್ಕೃತ್ಯ ನಡೆಸಿ ಕೇರಳಕ್ಕೆ ಪಲಾಯನ ನಡೆಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಚೆಕ್ ಪೋಸ್ಟ್ ಅನ್ನು ಇನ್ನಷ್ಟು ಭಲಗೊಳಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಲಾಗಿದೆ. ಮರ, ಮರಳು, ದನ ಸಹಿತ ಅಕ್ರಮ ಸಾಗಾಟ ಹಾಗೂ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಈ ಚೆಕ್ ಪೋಸ್ಟ್ ಮತ್ತಷ್ಟು ಸಹಕಾರಿಯಾಗಲಿದೆ.
ವಿಟ್ಲ ಠಾಣಾ ವ್ಯಾಪ್ತಿ ದೊಡ್ಡದಿರುವ ಹಿನ್ನೆಲೆಯಲ್ಲಿ ಇದೀಗಾಗಲೇ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚುಮಾಡಿ ಇತರ ಕಡೆಗಳಿಂದ ವರ್ಗಾವಣೆ ಮಾಡಲಾಗಿದೆ ಎಂದರು.