ಬಂಟ್ವಾಳ: ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ದಿನದ 24 ಗಂಟೆಯೂ ಸಾರ್ವಜನಿಕರ ಪೋನ್ ಕರೆ ಸ್ವೀಕರಿಸಬೇಕು, ಯಾವುದೇ ಕಾರಣಕ್ಕೆ ಸರಕಾರಿ ಸಿಮ್ ಹೊಂದಿರುವ ಮೊಬೈಲ್ ಪೋನ್ ಸ್ವಿಚ್ ಆಪ್ ಆಗಿರಕೂಡದು, ಪಾಕೃತಿಕ ವಿಕೋಪದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸಗಳು ಆಗಬೇಕು , ಆ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳು ಹೊಂದಾಣಿಕೆಯಿಂದ ಕೆಲಸ ಮಾಡಿ, ಟಾಸ್ಕ್ ಫೋರ್ಸ್ ಸಮಿತಿಯ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು.
ಪಾಕೃತಿಕ ವಿಕೋಪದ ಸಮಸ್ಯೆಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ ನಿಟ್ಟಿನಲ್ಲಿ ಅವರು ಶಾಸಕರ ಕಚೇರಿಯಲ್ಲಿ ಗೂಗಲ್ ಮೀಟಿಂಗ್ ನಡೆಸಿ ಅಧಿಕಾರಿಗಳಿಗೆ ಸೂಚಿಸಿದರು.
ಕಳೆದ ಕೆಲವು ದಿನಗಳಿಂದ ಮಳೆಯಿಂದ ತೀವ್ರ ಹಾನಿಗಳು ಸಂಭವಿಸುವ ಹಿನ್ನೆಲೆಯಲ್ಲಿ ತಾಲೂಕಿನ ಅಧಿಕಾರಿಗಳು ಅಯಾಯ ಗ್ರಾಮದಲ್ಲಿ ಇರಬೇಕು ಎಂಬ ಉದ್ದೇಶದಿಂದ ಶಾಸಕರು ಕಚೇರಿಯಲ್ಲಿ ತಹಶೀಲ್ದಾರ್ ಸ್ಮಿತಾರಾಮು, ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಅವರ ಉಪಸ್ಥಿತಿ ಯಲ್ಲಿ ತಾಲೂಕಿನ ಪಿ.ಡಿ.ಒ.ಗಳಿಗೆ ಹಾಗೂ ಅಧ್ಯಕ್ಷ ಉಪಾಧ್ಯಕ್ಷ , ಕಂದಾಯ ಇಲಾಖೆಯ ಅಧಿಕಾರ ಗಳ ಜೊತೆ ಗೂಗಲ್ ಮೀಟಿಂಗ್ ನಡೆಸಿ ಅವರ ಸಮಸ್ಯೆಗಳ ಮಾಹಿತಿ ಮತ್ತು ಸಮಸ್ಯೆ ಗಳಿಗೆ ಸ್ಪಂದಿಸುವ ಕೆಲಸ ಮಾಡಿದರು.
39 ಗ್ರಾಮ ಪಂಚಾಯತ್ ಗಳಲ್ಲಿ ಮನೆಗಳಿಗೆ ಹಾನಿಯಾಗುವ ಸಂಭವವು ಕಂಡು ಬಂದಲ್ಲಿ ತುರ್ತಾಗಿ ಮನೆಯಲ್ಲಿ ರುವ ಕುಟುಂಬಗಳನ್ನು ಸ್ಥಳಾಂತರ ಮಾಡುವ ಕೆಲಸ ಆರಂಭಿಕ ಹಂತದಲ್ಲಿ ಮಾಡಬೇಕು ಎಂದು ತಿಳಿಸಿದರು.
ಸ್ಥಳಾಂತರ ಮಾಡಲು ಒಪ್ಪದ ಕುಟುಂಬ ಗಳು ಇದ್ದಲ್ಲಿ ಪೋಲೀಸರ ಮೂಲಕ ಅವರ ಮನವೊಲಿಸಿ ಸೂಕ್ತವಾದ ಸ್ಥಳಕ್ಕೆ ಸ್ಥಳಾಂತರ ಮಾಡುವ ಕೆಲಸ ಮಾಡಬೇಕು.
ತಾಲೂಕಿನ ಎಲ್ಲಾ ಗ್ರಾ.ಪಂ.ಗಳು ಪಂಜಿಕಲ್ಲು ಗ್ರಾಮ ಪಂಚಾಯತ್ ಅವರ ಮಾದರಿಯಲ್ಲಿ ತಂಡ ರಚನೆ ಮಾಡಿ ಸಮಸ್ಯೆ ಗಳಿಗೆ ಸ್ಪಂದಿಸುವ ಕೆಲಸ ಮಾಡಿ ಎಂದು ಅವರು ಸಲಹೆ ನೀಡಿದರು .
ತಾಲೂಕಿನ ಪ್ರತಿ ಶಾಲಾ ಕಟ್ಟಡದ ಮೇಲೆ ನಿಗಾವಹಿಸಿ, ಕಟ್ಟಡದ ಸಮಸ್ಯೆ ಗಳು ಇದ್ದಲಿ ಅಂತಹ ಶಾಲೆಯ ಮಕ್ಕಳನ್ನು ಸುರಕ್ಷಿತ ಕೊಠಡಿಗಳಿಗೆ ಸ್ಥಳಾಂತರ ಮಾಡುವ ಕೆಲಸ ಶಿಕ್ಷಣ ಇಲಾಖೆಯ ಬಿ.ಇ.ಒ.ಜ್ಞಾನೇಶ್ ಅವರು ಮಾಡಬೇಕು ಎಂದು ಸೂಚನೆ ನೀಡಿದರು.
ಪಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ನಡೆದಲ್ಲಿ ತಾಲೂಕಿನ ಹಿರಿಯ ಅಧಿಕಾರಿಗಳಿಗೆ ಶೀಘ್ರವಾಗಿ ಮಾಹಿತಿ ನೀಡುವ ಕೆಲಸ ಮಾಡಿ, ಅದರ ನಷ್ಟ ಹಾಗೂ ಇತರ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ನೀಡುವಂತೆ ಅವರು ಸೂಚಿಸಿದರು.
ನದಿ ತೀರದ ಪ್ರದೇಶಗಳಲ್ಲಿ ನೀರಿನ ಹರಿವು ಹೆಚ್ಚಳವಾದಲ್ಲಿ ಅಂತಹ ಮನೆಯ ಸದಸ್ಯರ ನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಳಾಂತರ ಮಾಡುವಂತೆ ತಹಶೀಲ್ದಾರ್ ಸ್ಮಿತಾರಾಮು ತಿಳಿಸಿದರು.
ಜೊತೆಗೆ ಅಂತಹ ಮನೆಗಳಿಗೆ ಮುಂಜಾಗ್ರತಾ ಕ್ರಮವಾಗಿ ನೋಟೀಸ್ ಕೂಡ ಜಾರಿ ಮಾಡಬೇಕು ಎಂದು ಪಿ.ಡಿ.ಒ.ಗಳಿಗೆ ಸಲಹೆ ನೀಡಿದರು.
*ಹಾನಿಯಾಗುವ ಪ್ರದೇಶಗಳು ಹಾಗೂ ಕ್ರಮಗಳು*
ಅಮ್ಮುಂಜೆ ಕಿದೆಪಡ್ಪು ಎಂಬಲ್ಲಿ ಗುಡ್ಡ ಜರಿದು ಎರಡು ಮನೆಗಳಿಗೆ ಹಾನಿಯಾಗಿ ಬೀಳುವ ಹಂತದಲ್ಲಿ ರುವುದರಿಂದ ಅ ಎರಡು ಮನೆಯ ಸದಸ್ಯರುಗಳುನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಅಲ್ಲಿನ ಗ್ರಾಮಪಂಚಾಯತ್ ಅಧ್ಯಕ್ಷ ರು ಮೂಡಬಿದಿರೆ ಹೆದ್ದಾರಿಯ ರಾಯಿ -ಕುದ್ಕೋಳಿ ರಸ್ತೆಯ ಮಧ್ಯೆ ಅಣ್ಣಳಿಕೆ ಎಂಬಲ್ಲಿ ಚರಂಡಿ ಹೂಳೆತ್ತುವ ಕಾರ್ಯ ಮಾಡದೆ ಇರುವ ಕಾರಣ ರಸ್ತೆಯಲ್ಲಿ ನೀರು ತುಂಬಿದೆ ಎಂದು ರಾಯಿ ಗ್ರಾ.ಪಂ.ನ ದೂರಿನ ಹಿನ್ನೆಲೆಯಲ್ಲಿ ನಾಳೆ ಚರಂಡಿ ಹೂಳೆತ್ತುವ ಕಾರ್ಯ ಮಾಡಲು ಶಾಸಕರು ಪಿ.ಡಬ್ಲೂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕಟ್ಟತ್ತಿಲ ಎಂಬಲ್ಲಿ ನಿರ್ಮಿಸಿದ ಚೆಕ್ ಡ್ಯಾಂನಿಂದ ಅಲ್ಲಿ ಸುತ್ತಲೂ ಮಣ್ಣು ಹಾಕದ ಹಿನ್ನೆಲೆಯಲ್ಲಿ ಶಾಲೆಗೆ ಮಕ್ಕಳು ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಮಣ್ಣು ಹಾಕುವಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಅವರಿಗೆ ಶಾಸಕರು ಸೂಚಿಸಿದರು.
ತುಂಬೆ ಶಾಲಾ ಬಳಿ ರಾಷ್ಟ್ರೀಯ ಹೆದ್ದಾರಿ ಯಲ್ಲಿರು ಹೈವೆ ಓವರ್ ಬ್ರಿಡ್ಜ್ ನ ಕಬ್ಬಿಣ ತುಕ್ಕು ಹಿಡಿದು ಬೀಳುವ ಹಂತದಲ್ಲಿದ್ದು ಈ ಬಗ್ಗೆ ಗಮನ ಹರಿಸಲು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯ ಅವಾಂತರದಿಂದ ಹೆದ್ದಾರಿ ಯಲ್ಲಿ ನಿತ್ಯ ಸಂಚಾರಕ್ಕೆ ಅಡಚಣೆ ಒಂದೆಡೆಯಾದರೆ, ಗೋಳ್ತಮಜಲು ಗ್ರಾಮಪಂಚಾಯತ್ ಕಚೇರಿ ಹಾಗೂ ಕುದ್ರೆಬೆಟ್ಟು ಅಯ್ಯಪ್ಪ ಮಂದಿರ ಸಹಿತ ಅನೇಕ ಮನೆ ಹಾಗೂ ಅಂಗಡಿಗಳಿಗೆ ಹಾನಿಯಾಗುವ ಸಂಭವಿದೆ ಎಂಬ ದೂರಿಗೆ ಸ್ಪಂದಿಸಿಸದ ಶಾಸಕರು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ನ್ನು ಸ್ಥಳಕ್ಕೆ ಕರೆದು ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಇದರ ಜೊತೆಯಲ್ಲಿ ಅನೇಕ ಸಣ್ಣ ಪುಟ್ಟ ಸಮಸ್ಯೆ ಗಳಿಗೆ ಶಾಸಕರು ಸ್ಥಳ ದಿಂದಲೇ ಅಧಿಕಾರಿಗಳ ಜೊತೆ ಪೋನ್ ಮೂಲಕ ಸಂಪರ್ಕ ಮಾಡಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದರು.