ಬಂಟ್ವಾಳ ; ಅಮರನಾಥದ ಪವಿತ್ರ ಗುಹಾಲಯದ ಸಮೀಪದಲ್ಲಿ ಶುಕ್ರವಾರ ಉಂಟಾದ ಮೇಘ ಸ್ಪೋಟದಿಂದ ದಿಢೀರ್ ಪ್ರವಾಹದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಸೋಮವಾರ ಬೆಳಿಗ್ಗೆ ಪುನರಾರಂಭಿಸಲಾಗಿದ್ದು, ದಿನದ ಮಟ್ಟಿಗೆ ಮಿಲಿಟ್ರಿ ಬೇಸ್ ನಲ್ಲಿ ವಿಶ್ರಾಂತಿ ಪಡೆದಿದ್ದ ಬಂಟ್ವಾಳದ ಯಾತ್ರಿಕರೂ ದರ್ಶನದ ತವಕದಲ್ಲಿದ್ದಾರೆ.
ಅಮರನಾಥ ನಡೆದ ಮೇಘಸ್ಪೋಟದಿಂದ ಹಲವಾರು ಜೀವಹಾನಿ ಆಗಿತ್ತು, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಸಹಿತ ಎಲ್ಲಾ ಕನ್ನಡಿಗರೂ ಸುರಕ್ಷಿತರಾಗಿದ್ದಾರೆ ಎಂದೂ ಸರ್ಕಾರ ಸ್ಪಷ್ಟ ಪಡಿಸಿದ್ದರು. ನಡೆದಿದ್ದ ದುರ್ಘಟನೆ ಹಿನ್ನೆಲೆ ವಿವಿಧ ರಾಜ್ಯಗಳ ಹಲವರು ತಮ್ಮ ಯಾತ್ರೆಯನ್ನು ಮೊಟಕುಗೊಳಿಸಿದ್ದರು. ಆದರೆ ಅಮರನಾಥ ದ ವರೆಗೆ ತಲುಪಿದ್ದ ಬಂಟ್ವಾಳದ ತಂಡ ಮಿಲಿಟ್ರಿ ಬೇಸ್ ನಲ್ಲಿ ಇತರ ಸಹಸ್ರ ಸಹಸ್ರ ಯಾತ್ರಿಗಳ ಜೊತೆ ವಿಶ್ರಾಂತಿ ಪಡೆದಿದ್ದರು. ಭಾನುವಾರ ಸ್ಥಳಕ್ಕೆ ಭೇಟಿನೀಡಿದ್ದ ಅಲ್ಲಿನ ರಾಜ್ಯಪಾಲರು ಸೋಮವಾರ ಬೆಳಿಗ್ಗೆ ದರ್ಶನಕ್ಕೆ ಅವಕಾಶ ಒದಗಿಸುವುದಾಗಿ ತಿಳಿಸಿದ್ದು, ಅದರಂತೆ ಇಂದು ಬೆಳಗ್ಗೆಯಿಂದ ಅಮರನಾಥ ದರ್ಶನಕ್ಕೆ ತೆರಳುತ್ತಿರುವುದಾಗಿ ಯಾತ್ರಿ ಸುರೇಶ್ ಕೋಟ್ಯಾನ್ ಮಾಹಿತಿ ನೀಡಿದ್ದಾರೆ.