ವಿಟ್ಲ: ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಮರದಿಂದ ಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಟ್ಲ ಕಸಬಾ ಗ್ರಾಮದ ಕೊಳಂಬೆ ನಿವಾಸಿ ಅಬ್ದುಲ್ ನಾಸೀರ್ (24) ಮೃತ ವ್ಯಕ್ತಿ. ಜೂನ್ 6ರಂದು ಸೂರ್ಯದ ಕೃಷಿಕರೊಬ್ಬರ ತೋಟದಲ್ಲಿ ಕೆಲಸ ಮಾಡುವ ಸಂದರ್ಭ ಮರದಿಂದ ಆಕಸ್ಮಿಕವಾಗಿ ಕೈ ಕಾಲು ಜಾರಿ ನೆಲಕ್ಕೆ ಬಿದ್ದು ತೀವ್ರ ಸ್ವರೂಪದ ಗಾಯಗೊಂಡಿದ್ದು, ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆಗೆ ಕರೆದುಕೊಂಡು ಹೋಗಿದ್ದು, ಜೂ.9ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.