ಬಂಟ್ವಾಳ: ಪ್ರಧಾನಿ ಮೋದಿ ಆಡಳಿದಿಂದ ದೇಶದಲ್ಲಿ ಭಯೋತ್ಪಾಧನೆ ನಿಂತಿದ್ದು, ದೇಶದ ಯಾವ ಹಳ್ಳಿಯಲ್ಲೂ ಬಾಂಬ್ ಸಿಡಿದಿಲ್ಲ. ಬಿಜೆಪಿ ಆಡಳಿತದಲ್ಲಿ ನಕ್ಸಲ್ ಚಟುವಟಿಕೆಯೂ ಸಂಪೂರ್ಣ ನಿಂತು ಹೋಗಿದೆ. ಆಡಳಿತ, ರಾಜಕೀಯ, ಸಾಂಸ್ಕೃತಿಕವಾಗಿ ಹೀಗೆ ಮೂರು ರೀತಿಯಲ್ಲಿ ಮೋದಿ ದೇಶವನ್ನು ಪರಿವರ್ತನೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ 8ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರದಿಂದ ಹಮ್ಮಿಕೊಂಡಿದ್ದ ವಿಕಾಸ್ ತೀರ್ಥ ಬೈಕ್ ರ‍್ಯಾಲಿಯ ಸಮಾರಂಭ ಸಮಾರಂಭವನ್ನು ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಭ್ರಷ್ಟಾಚಾರ, ಭಯೋತ್ಪಾದನೆ, ವಂಶಾಡಳಿತದ ಕೊಡುಗೆ ನೀಡಿದೆ. ರಷ್ಯಾ- ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಅಲ್ಲಿನ ಅಧ್ಯಕ್ಷರು-ಪ್ರಧಾನಿಯ ಬಳಿ ಮಾತನಾಡಿ 4 ಬಾರಿ ಯುದ್ಧ ನಿಲ್ಲಿಸಿ 22000 ಭಾರತೀಯ ವಿದ್ಯಾರ್ಥಿಗಳ ಜತೆಗೆ ಪಕ್ಕದ ರಾಷ್ಟ್ರದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ. ಅಯೋಧ್ಯೆ ಶ್ರೀರಾಮ ಮಂದಿರ, ಕಾಶಿಯಲ್ಲಿ ಶ್ರೀ ವಿಶ್ವನಾಥ ಸನ್ನಿಧಿ ಪುನರ್ ನಿರ್ಮಾಣ ಮೋದಿ ಕಾಲಘಟ್ಟದಲ್ಲಿ ನಡೆಯುತ್ತಿದೆ.
ಕಾಂಗ್ರೆಸ್‌ನ ಆಡಳಿತದಲ್ಲಿ ಹಗರಣಗಳೇ ತುಂಬಿದ್ದು, ಅದು ಭ್ರಷ್ಟಾಚಾರಿಗಳ ಕೂಟವಾಗಿದೆ. ಅದರ ರಾಷ್ಟ್ರೀಯ ಅಧ್ಯಕ್ಷರ ಜತೆಗೆ ಅವರ ಗಾಂಧಿ ಕುಟುಂಬ, ರಾಜ್ಯದ ಅಧ್ಯಕ್ಷ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರು ಬೇಲ್‌ನಲ್ಲಿದ್ದಾರೆ. ಅರ್ಕಾವತಿ ಹಗರಣ ಹೊರಗೆ ಬಂದರೆ ಸಿದ್ಧರಾಮಯ್ಯ ಅವರು ಜೈಲಿಗೆ ಹೋಗುತ್ತಾರೆ. ಇಡೀ ರಾಜ್ಯದಲ್ಲಿ ಯುವ ಮೋರ್ಚಾವು ಸಂಘಟಿತ ಶಕ್ತಿಯಾಗಿ ಕೆಲಸ ಮಾಡುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.
ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ| ಸಂದೀಪ್ ಕುಮಾರ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿದರು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಗುರುದತ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿ ಕ್ಷೇತ್ರದ ತಲಾ 10 ಮಂದಿ ಯುವ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ, ರಾಮದಾಸ್ ಬಂಟ್ವಾಳ, ಯುವ ಮೋರ್ಚಾ ಪ್ರಭಾರಿ ಸತೀಶ್ ಕುಂಪಲ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ ಕುಮಾರಿ, ವಿಧಾನ ಮಂಡಲಗಳ ಯುವ ಮೋರ್ಚಾ ಅಧ್ಯಕ್ಷರಾದ ಯಶವಂತ ಬೆಳಾಲು, ಭರತ್‌ರಾಜ್ ಕೃಷ್ಣಾಪುರ, ಸಚಿನ್‌ರಾಜ್ ರೈ, ಸಚಿನ್ ಮೋರೆ, ಸಚಿನ್ ಶೆಣೈ, ನವೀನ್, ಕೃಷ್ಣ ಎಂ.ಆರ್., ಅಶ್ವಥ್ ಪಣಪಿಲ ವೇದಿಕೆಯಲ್ಲಿದ್ದರು.
ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ಸ್ವಾಗತಿಸಿ, ಮತ್ತೋರ್ವ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡ್ ವಂದಿಸಿದರು. ಯತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.