ಸಮಾಜ ಕಲ್ಯಾಣ ಇಲಾಖೆಗೆ ಒಳಪಟ್ಟ ಬಿಸಿರೋಡು ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಮಂಗಳೂರು ಲೋಕಾಯುಕ್ತ ಇನ್ಸ್ ಪೆಕ್ಟರ್ ಅಮಾನುಲ್ಲಾ ಅವರ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿನ ಸಿಬ್ಬಂದಿಗಳಿಗೆ ಕಿವಿ ಮಾತು ಹೇಳಿದ್ದಾರೆ.
ದಲಿತ ಮುಖಂಡ ವಿಶ್ವನಾಥ ಚೆಂಡ್ತಿಮಾರ್ ಅವರ ದೂರಿನ ಮೇರೆಗೆ ಬೇಟಿ ನೀಡಿದ ವೇಳೆ ಹಾವು ಶಾಲೆಯ ತರಗತಿಯ ಒಳಗೆ ಬರಲು ಹವಣಿಸುತ್ತಿರುವದನ್ನು ಕಂಡು ಸಿಬ್ಬಂದಿ ಗಳಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆಯಿತು.
ಶಾಲೆಯ ಸುತ್ತಲೂ ಗಿಡಪೊದೆಗಳಿಂದ ತುಂಬಿರುವುದನ್ನು ಕಂಡು ಕೋಪಗೊಂಡ ಇನ್ಸ್ ಪೆಕ್ಟರ್ ಅಮಾನುಲ್ಲಾ ಅವರು ಶಾಲೆಯ ಸುತ್ತ ಯಾಕ್ರೀ ಪೊದೆಗಳನ್ನು ಕ್ಲೀನ್ ಮಾಡಿಸಿಲ್ಲ ಎಂದು ಕೇಳಿದ್ದಲ್ಲದೆ, ಸ್ಥಳೀಯ ಪುರಸಭೆಗೆ ಹಾಗೂ ಆಶ್ರಮ ಶಾಲೆಗೆ ತಾಗಿಕೊಂಡ ಜಮೀನಿನವರಿಗೂ ತಿಳಿಸಿ,ಅದಷ್ಟು ಬೇಗ ಸ್ವಚ್ಚಗೊಳಿಸಿ ಎಂದು ಸೂಚನೆ ನೀಡಿದ್ದಾರೆ.
ಪುಟಾಣಿ ಗಳು ಹೆದರಿಕೆಯಿಂದ ಇಲ್ಲಿ ಪಾಠ ಕೇಳಬೇಕಾ,ಎಂದು ಪ್ರಶ್ನಿಸಿದ ಅವರು ಶಿಥಿಲಾವಸ್ಥೆಗೆ ತಲುಪಿದ ಕಟ್ಟಡ ದ ದುರಸ್ತಿಗಾಗಿ ಸಂಬಂಧ ಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಕೆಲಹೊತ್ತು ಮಕ್ಕಳ ಜೊತೆ ಮಾತನಾಡಿ ಮಾಹಿತಿ ಪಡೆದ ಅವರು ಇಲ್ಲಿನ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅವರು ತಿಳಿಸಿದರು.