


ವಿಟ್ಲ: ಧರ್ಮವನ್ನು ಆಶ್ರಯಿಸಿದ ದೇಶದಲ್ಲಿ ಕಾನೂನಿನ ಅವಶ್ಯಕತೆಯಿರುವುದಿಲ್ಲ. ಮೌಲ್ಯ ಯುತ ಬದುಕಿನ ತತ್ವವನ್ನು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಪರಮ ಶ್ರೇಷ್ಠ ಸಂತರ ಸಾಲಲ್ಲಿ ನಿಲ್ಲುತ್ತಾರೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಅವರು ಭಾನುವಾರ ಸಾಲೆತ್ತೂರು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಿರ್ಮಾಣವಾಗಲಿರುವ ವಿಶ್ವಗುರು ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿ ದ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಪ್ರತಿಯೊಬ್ಬರಲ್ಲೂ ಅಧ್ಯಾತ್ಮಿಕತೆಯ ಬೆಳಕು ಜಾಗೃತವಾಗಬೇಕು ಎಂದು ತಿಳಿಸಿದರು.
ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಗುರು ಎಂದರೆ ಶಕ್ತಿ. ಮೂಲ ನಂಬಿಕೆಗಳಿಗೆ ಒತ್ತು ನೀಡಿದ ಮಹಾನ್ ಗುರು ಬ್ರಹ್ಮಶ್ರೀ ನಾರಾಯಣಗುರುಗಳ ಮಾನವ ಪ್ರೀತಿ, ಮಾಧವ ಧರ್ಮ ಪರಿಕಲ್ಪನೆ, ದೇಶದ ಸಾಮಾಜಿಕ ಸುಧಾರಣೆ, ಪ್ರವರ್ಧಮಾನತೆಗೆ ಕಾರಣವಾಗಿದೆ ಎಂದರು.
ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ, ಸಂದೇಶ, ಸಿದ್ಧಾಂತಗಳು ಅರ್ಥಪೂರ್ಣವಾಗಿ ಅನುಷ್ಠಾನವಾಗಬೇಕು ಎಂದು ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿಯ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ನುಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಮಾತನಾಡಿ, ರಮಣೀಯ ನಿಸರ್ಗದ ಮಧ್ಯೆ ನಿರ್ಮಾಣವಾಗುವ ಬ್ರಹ್ಮಶ್ರೀ ನಾರಾಯಣಗುರು ಮಂದಿರ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಬೇಡಿಕೆಯ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ, ಅವರು ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೇ ಆರಂಭಗೊಳ್ಳಲಿದೆ ಎಂದರು.
ಮೈಸೂರಿನ ಹಿರಿಯ ವಕೀಲ ಓ.ಶ್ಯಾಮ್ ಭಟ್ ಮಾತನಾಡಿದರು.
ಸಮಾರಂಭದಲ್ಲಿ ಪುರೋಹಿತ ಹರೀಶ್ ಶಾಂತಿ,ಬಂಟ್ವಾಳ ತಾ. ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಉದ್ಯಮಿಗಳಾದ ಮಾಧವ ಮಾವೆ, ಪುರುಷೋತ್ತಮ ಸಾಲಿಯಾನ್, ಸಮಾಜ ಸೇವಕ ದೇವಿದಾಸ್ ಶೆಟ್ಟಿ ಪಾಲ್ತಾಜೆ, ಶೇಖರ ಪೂಜಾರಿ ಮಾವೆ, ಜನಾರ್ದನ ಪೂಜಾರಿ ಕೆ.ಕೆ, ಸ್ಥಳದಾನಿ ಕೃಷ್ಣಪ್ಪ ಪೂಜಾರಿ ಪಾಲ್ತಾಜೆ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವೀಂದ್ರ ಪೂಜಾರಿ ನೂಜಿಬೈಲು ಕೋಡಿ ವಂದಿಸಿದರು. ಅಶ್ವಿನ್ ಕುಮಾರ್, ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಸಾಲೆತ್ತೂರು ಮೈದಾನದಿಂದ ಚೆಂಡೆ ಮೇಳ, ಕುಣಿತ ಭಜನಾ ತಂಡ ಸಹಿತ ಆಕರ್ಷಕ ಮೆರವಣಿಗೆ ನಡೆಯಿತು. ಸ್ವಾಮೀಜಿಗಳವರ ಸಮಕ್ಷಮದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.
ಉಚಿತ ಆರೋಗ್ಯ ತಪಾಸಣಾ ಶಿಬಿರ:
ಇದೇ ಸಂದರ್ಭದಲ್ಲಿ ಬಿಲ್ಲವ ಸಂಘ ವಿಟ್ಲ ಇದರ ಬೆಳ್ಳಿಹಬ್ಬ ಸಂಭ್ರಮೋತ್ಸವದ ಪ್ರಯುಕ್ತ ನಡೆಯುವ 25 ಕಾರ್ಯಕ್ರಮಗಳಲ್ಲಿ ನಾಲ್ಕನೇ ಕಾರ್ಯಕ್ರಮದ ಅಂಗವಾಗಿ ಸಂಘದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.


