ಬಂಟ್ವಾಳ: ಬಂಟ್ವಾಳದ ವಿದ್ಯಾಗಿರಿಯ ಅರ್ಬಿಗುಡ್ಡೆ ಎಂಬಲ್ಲಿ ಸಮಗ್ರ ವಿದ್ಯುತ್ ಯೋಜನೆಯಡಿ ನಿರ್ಮಾಣಗೊಂಡ ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರವನ್ನು ಮೇ9 ರಂದು ಸೋಮವಾರ ಇಂಧನ ಸಚಿವ ವಿ.ಸುನಿಲ್ ಕುಮಾರ್ ಮಧ್ಯಾಹ್ನ 3 ಗಂಟೆಗೆ ಉದ್ಘಾಟಿಲಿದ್ದಾರೆ.
ಸಚಿವರಾದ ಎಸ್.ಆಂಗಾರ, ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ವಹಿಸಲಿದ್ದು, ವಿವಿಧ ಗಣ್ಯರು, ಅಧಿಕಾರಿಗಳು ಆಗಮಿಸಲಿದ್ದಾರೆ ಎಂದು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಪ್ರಕಟಣೆ ತಿಳಿಸಿದೆ.
ಬಂಟ್ವಾಳ 33/11ಕೆವಿ ವಿದ್ಯುತ್ ಉಪಕೇಂದ್ರಕ್ಕೆ ರೂ. 11.98 ಕೋಟಿ ವೆಚ್ಚವಾಗಿದೆ. 2*8 ಎಂವಿಎ ಸಾಮರ್ಥ್ಯದ, ಒಟ್ಟು 7 ಸಂಖ್ಯೆಯ 11 ಕೆವಿ ವಿದ್ಯುತ್ ಮಾರ್ಗಗಳು (ಫೀಡರ್ಗಳು) 10.25 ಕಿ.ಮೀ, 2 ಸಂಖ್ಯೆಯ 33 ಕೆವಿ ಇನ್ಕಮಿಂಗ್ ವಿದ್ಯುತ್ ಮಾರ್ಗಗಳು 4.04 ಕಿ.ಮೀ ಇದಕ್ಕೆ ಒಳಗೊಂಡಿದ್ದು, ಬಂಟ್ವಾಳ ಕಸಬಾ, ಬಿ ಮೂಡ, ಅಮ್ಟಾಡಿ, ಕುರಿಯಾಳ, ನಾವೂರು, ಮೂಡನಡುಗೋಡು, ಪಂಜಿಕಲ್ಲು ಇತ್ಯಾದಿ ಪ್ರದೇಶಗಳ 14,000 ಗ್ರಾಹಕರಿಗೆ ಇದರಿಂದ ಅನುಕೂಲವಾಗಲಿದೆ.