


ವಿಟ್ಲ: ಸಮಾಜದ ಒಟ್ಟು ಅಭಿವೃದ್ಧಿಗೆ ಜಾತಿ ಸಂಘಟನೆ ಪೂರಕವಾಗಿದೆ. ಮುಖ್ಯ ವಾಹಿನಿಯಲ್ಲಿ ಗಾಣಿಗರ ಸಮಾಜ ಬಾಂಧವರು ಮುಂಚೂಣಿಗೆ ಬರುವ ಅವಶ್ಯಕತೆಯಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಭಾನುವಾರ ಮೈರ ವಿಟ್ಲ ಗಾರ್ಡನ್ ಸಭಾಭವನದಲ್ಲಿ ವಿಟ್ಲ ವಾಣಿಯನ್ ಗಾಣಿಗ ಸಮಾಜದ ಸೇವಾ ಸಂಘದಿಂದ ನಡೆದ ವಾಣಿಯೋತ್ಸವ 2022ದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಂಘಕ್ಕೆ ಅವಶ್ಯಕ ನೆರವು ನೀಡಲಾಗುವುದು ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ ದೇಶದ ಪ್ರವರ್ಧಮಾನತೆಗೆ ಪ್ರತಿಯೊಂದು ಸಮುದಾಯಗಳ ಪಾತ್ರ ಮಹತ್ತರವಾಗಿದೆ. ವಾಣಿಯನ್ ಗಾಣಿಗರ ಸಮಾಜದ ಜೀವನ ಪದ್ಧತಿ ವಿಶಿಷ್ಟವಾಗಿದ್ದು, ಹಿಂದೂ ಧರ್ಮದ ಪ್ರಜ್ವಲತೆಗೆ ಕಾರಣವಾಗಿದೆ ಎಂದರು. ವಾಣಿಯನ್ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ 10 ಲಕ್ಷ ಅನುದಾನ ಒದಗಿಸಲಾಗುವುದು, ಭವನ ನಿರ್ಮಿಸಲು ಭೂಮಿ ಗುರುತಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿದ ಬಳಿಕ ಮಂಜೂರುಗೊಳಿಸುವ ಬಗ್ಗೆ ಭರವಸೆ ನೀಡಿದರು.
ಚಂದ್ರಹಾಸ ಮುರೂರು ಧಾರ್ಮಿಕ ಉಪನ್ಯಾಸ ನಡೆಸಿದರು.
ಇದೇ ಸಂದರ್ಭದಲ್ಲಿ ದ. ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ರಾಮ ಮುಗ್ರೋಡಿ ಮಂಗಳೂರು, ಕಾಸರಗೋಡು ಸಿ. ಪಿ. ಸಿ. ಆರ್. ಐ. ನಿವೃತ್ತ ತಾಂತ್ರಿಕ ಅಧಿಕಾರಿ ಬಾಲಕೃಷ್ಣ ವಾಟೆ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಾಧಕರನ್ನು ಪುರಸ್ಕರಿಸಲಾಯಿತು.
ವಿಟ್ಲ ಸೀಮೆಯ ಕೋಮರ ಅಚ್ಚನ್ಮಾರರು, ಚೆಟ್ಟಿಯಾರ್, ಜಂಡಕ್ಕ, ಬೆಳ್ಳಿಪಾಡಚ್ಚನ್ ಪಟ್ಟಿಗಾರರು, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರೀ, ಉದ್ಯಮಿಗಳಾದ ಸುರೇಶ್ ಕಾಸರಗೋಡು, ಪ್ರೀತಂ ಬೆಂಗಳೂರು, ವಾಣಿಯನ್ ಗಾಣಿಗ ಸಮುದಾಯ ಮುಖಂಡರಾದ ರಾಧಾಕೃಷ್ಣ ಸೂರ್ಲ, ದೇವದಾಸ ಮಾಸ್ತರ್ ಪೆರ್ಲ, ರಘು ಕಲ್ಕಾರ್ ಮಾಣಿ, ಕೆ. ಸಿ. ಮೋಹನ ಕಳತ್ತೂರು, ಸುಬ್ಬಪ್ಪ ಪಟ್ಟೆ, ಚಂದ್ರಶೇಖರ ಉದ್ದಂತ್ತಡ್ಕ, ರಾಜೇಶ್, ರಮೇಶ್ ಪೆರ್ನೆ, ಬಾಬು ವಾಟೆ ಮತ್ತಿತರರು ಉಪಸ್ಥಿತರಿದ್ದರು.
ವಿಟ್ಲ ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘದ ಅಧ್ಯಕ್ಷ ಉದಯಕುಮಾರ್ ದಂಬೆ ಸ್ವಾಗತಿಸಿದರು. ಶಂಕರ್ ಕೋಡಿಜಾಲ್ ವಂದಿಸಿದರು. ಕಾರ್ಯದರ್ಶಿ ದಿನಕರ್ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಬಳಿಕ ಸಮುದಾಯದ ಮಕ್ಕಳಿಂದ ನೃತ್ಯ ವೈವಿಧ್ಯ, ತನುಜಾ ಕಿಶನ್ ನಿರ್ದೇಶನದಲ್ಲಿ ಶ್ರೀ ಗಜಾನನ ನಾಟ್ಯಾಂಜಲಿ ತಂಡದಿಂದ ನೃತ್ಯ ವೈವಿಧ್ಯ, ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಪ್ರಸಿದ್ದ ಕಲಾವಿದರಿಂದ ಜಾಂಬವತೀ ಕಲ್ಯಾಣ ಯಕ್ಷಗಾನ ನಡೆಯಿತು.


